ಹೇರೂರು ಗ್ರಾಪಂಗೆ ಅಶ್ವಥ್ ಅಧ್ಯಕ್ಷ

grama panchayat
ಹೇರೂರು ಗ್ರಾಪಂ ನೂತನ ಅಧ್ಯಕ್ಷ ಅಶ್ವಥ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಕುಕ್ಕುಡಿಗೆ ರವಿಂದ್ರ, ನಾಗೇಶ್ ಅಮೀನ್, ರಂಗಪ್ಪಗೌಡ, ಸುಕುಮಾರ್ ಇತರರಿದ್ದರು.
Published on

ಜಯಪುರ: ಹೇರೂರು ಗ್ರಾಪಂ ಅಧ್ಯಕ್ಷರಾಗಿ ದೇವಗೋಡು ವಾರ್ಡಿನ ಸದಸ್ಯ ಕಾಂಗ್ರೆಸ್ ಬೆಂಬಲಿತ ಅಶ್ವಥ್ ಅವಿರೋಧವಾಗಿ ಆಯ್ಕೆಯಾದರು.

17 ಸದಸ್ಯ ಬಲದ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ 10 ಹಾಗೂ ಬಿಜೆಪಿ ಬೆಂಬಲಿತ 7 ಸದಸ್ಯರಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಅಶ್ವಥ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಆಂತರಿಕ ಒಪ್ಪಂದದಂತೆ ಮುಂದಿನ 15 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಉಪಾಧ್ಯಕ್ಷ ಸ್ಧಾನ ಬಿಸಿಎಂಎ ಮಹಿಳೆಗೆ ಮೀಸಲಾಗಿತ್ತು. ನಾಮಪತ್ರ ಸಲ್ಲಿಸಿದ್ದ ಅಶ್ವಿನಿ ಗಿರೀಶ್ ಅವರ ಜಾತಿ ಪ್ರಮಾಣ ಪತ್ರದ ಅವಧಿ ಮುಗಿದಿದ್ದ ಕಾರಣ ನಾಮಪತ್ರ ತಿರಸ್ಕೃತವಾಗಿ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಲ್ಪಟ್ಟಿತು.
ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಹೇರೂರು ಪಿಎಸಿಎಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಗ್ರಾಪಂ ಸೇರಿ ಯಾವುದೇ ಸಾರ್ವಜನಿಕ ವಲಯದ ಜವಾಬ್ದಾರಿಗಳು ಅಧಿಕಾರವಲ್ಲ. ಅದು ಜನರ ಸೇವೆಗಾಗಿ ನಮಗೆ ಬಂದಿರುವ ಅವಕಾಶ. ಪ್ರಾಮಾಣಿಕವಾಗಿ, ಕಾನೂನಿನ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಜನ ವಸತಿ ರಹಿತರಿದ್ದು, ಅವರಿಗೆ ನಿವೇಶನ ನೀಡುವತ್ತ ವಿಶೇಷ ಪ್ರಯತ್ನ ಮಾಡಬೇಕು ಎಂದರು.
ಕೊಪ್ಪ ತಾಲೂಕು ಕೆಡಿಪಿ ಸದಸ್ಯ ನಾಗೇಶ್ ಅಮೀನ್ ಮಾತನಾಡಿ, ಪ್ರಭಾವಿಗಳ ಬಳಿಯೇ ಇರುತ್ತಿದ್ದ ಅಧಿಕಾರವನ್ನು ಮೀಸಲಾತಿ ಮೂಲಕ ಸಾಮಾನ್ಯರಿಗೂ ನೀಡಿದ ಕೀರ್ತಿ ಡಾ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಸಲ್ಲುತ್ತದೆ. ಅಧಿಕಾರ ಹಿಡಿದವರು. ಜಾತಿ, ಮತ, ಪಂಥ ಹಾಗೂ ಧರ್ಮದ ಎಲ್ಲೆಯನ್ನು ಮೀರಿ ಮನುಜ ಮತದ ಭಾವನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಅಶೋಕ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕೊಪ್ಪ ತಾಲೂಕು ಕೆಡಿಪಿ ಸದಸ್ಯ ನಾಗೇಶ್ ಅಮೀನ್, ಪಿಎಸಿಎಸ್ ನಿರ್ದೇಶಕ ಕೆ.ಪಿ.ರಂಗಪ್ಪ ಗೌಡ, ಗ್ರಾಪಂ ನಿರ್ಗಮಿತ ಅಧ್ಯಕ್ಷೆ ಶೋಭಾ, ಮುಖಂಡರಾದ ಸುಕುಮಾರ್, ಸಂಜೀವ, ಶಬರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net