ಸರ್ಕಾರದ ವಿರುದ್ಧ ‘ಬರ ಅಸ್ತ್ರ’ ಚೂಪುಗೊಳಿಸಲು ಅಶೋಕ್ ಸನ್ನಾಹ

RAshok
Published on

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ, ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳನ್ನು ಪರಿಶೀಲಿಸಲು ಆರ್.ಅಶೋಕ್ ಪ್ರವಾಸ ಮುಂದುವರಿಸಿದ್ದು, ಬೆಳಗಾವಿ ಅಧಿವೇಶನಕ್ಕೆ ಮುನ್ನ ಬರ ಅಸ್ತ್ರಕ್ಕೆ ಹೊಳಪು ಮತ್ತು ತೀಕ್ಷ್ಣತೆ ನೀಡಲು ಸಜ್ಜಾಗುತ್ತಿದ್ದಾರೆ.

ಬುಧವಾರ ಮತ್ತು ಗುರುವಾರ ಮತ್ತೆ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಕಲಬುರಗಿ, ಬೀದರ್, ತುಮಕೂರು, ಚಿತ್ರದುರ್ಗ ಸೇರಿ ಎಂಟು ಜಿಲ್ಲೆಗಳಲ್ಲಿ ಬರಗಾಲದಿಂದ ಜನರು, ರೈತರು ಅನುಭವಿಸುತ್ತಿರುವ ಬವಣೆ, ಸರ್ಕಾರದ ನೀರಸ ಸ್ಪಂದನೆ ಬಗ್ಗೆ ಮಾಹಿತಿ, ದತ್ತಾಂಶವನ್ನು ಸಂಗ್ರಹಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಕೊಡತಾಳ ಗ್ರಾಮದ ಹೊಲಗಳಿಗೆ ಬುಧವಾರ ತೆರಳಿ, ಬೆಳೆ ಹಾನಿ ಪರಿಶೀಲಿಸಿ ರೈತರೊಂದಿಗೆ ಚರ್ಚಿಸಲಿದ್ದಾರೆ. ಸಂಜೆ ಶಿವಮೊಗ್ಗಕ್ಕೆ ಹೊರಟು ವಾಸ್ತವ್ಯ ಹೂಡುವರು.

ಗುರುವಾರ ಬೆಳಗ್ಗೆ 11ಕ್ಕೆ ಶಿಕಾರಿಪುರದಲ್ಲಿ ಬಿಜೆಪಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಚಿಕ್ಕಮಗಳೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು. ಕಡೂರು ತಾಲೂಕು ಚಿಕ್ಕಪಟ್ಟಣಗೆರೆ ಗ್ರಾಮದಲ್ಲಿ ಬರದಿಂದ ಬೆಳೆ ಹಾನಿಯಾಗಿರುವ ರೈತ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ಅಂದೇ ರಾತ್ರಿ ಬೆಂಗಳೂರಿಗೆ ಹಿಂತಿರುಗುವರು.

ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ !

ಒಂದೆಡೆ ರಾಜ್ಯದ ಅಭಿವೃದ್ಧಿಗೆ ಹಣವಿಲ್ಲದೆ ಕೆಲಸಗಳ ಸ್ಥಗಿತಗೊಂಡಿರುವುದನ್ನು ಮುಚ್ಚಿಕೊಳ್ಳಲು ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಮತ್ತೊಂದೆಡೆ ತೆಲಂಗಾಣ ರಾಜ್ಯದ ದಿನಪತ್ರಿಕೆಗಳಲ್ಲಿ ಜಾಹೀರಾತು ಕೊಡಲು ರಾಜ್ಯದ ಬೊಕ್ಕಸ ದುರುಪಯೋಗ ಮಾಡಿಕೊಂಡು, ಚುನಾವಣಾ ಆಯೋಗದಿಂದ ಛೀಮಾರಿ ಹಾಕಿಸಿಕೊಂಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿವಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ತೆಲಂಗಾಣ ದಿನಪತ್ರಿಕೆಗಳಿಗೆ ರಾಜ್ಯ ಸರ್ಕಾರ ಗ್ಯಾರಂಟಿಗಳ ಕುರಿತು ಜಾಹೀರಾತು ನೀಡಿದೆ. ಇದನ್ನು ಚುನಾವಣಾ ಆಯೋಗ ಆಕ್ಷೇಪಿಸಿ ನೋಟಿಸ್ ನೀಡಿದ್ದರ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಗ್ಯಾರಂಟಿಗಳನ್ನು ಸರಿಯಾಗಿ ಜಾರಿ ಮಾಡಲಾಗದೆ ದಿನಕ್ಕೊಂದು ಕುಂಟು ನೆಪ, ನೂರೆಂಟು ಷರತ್ತುಗಳನ್ನು ಹಾಕಿ ಕನ್ನಡಿಗರಿಗೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ. ಎಲ್ಲ ಐದು ಗ್ಯಾರಂಟಿಗಳನ್ನು ಚಾಚೂ ತಪ್ಪದೆ ಜಾರಿ ಮಾಡಿಬಿಟ್ಟಿದ್ದೇವೆ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಜಾಹೀರಾತು ನೀಡುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net