

ನವದೆಹಲಿ: ಜಮ್ಮು& ಕಾಶ್ಮೀರದಲ್ಲಿ ಭಯೋತ್ಪಾದಕರು ಇನ್ನಷ್ಟು ದುಷತ್ಯ ನಡೆಸಲು ಸಂಚು ರೂಪಿಸುತ್ತಿದ್ದು, ಈ ಸಂಬಂಧ ಉಗ್ರ ಸಂಟನೆಗಳೊಂದಿಗೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಮಾತುಕತೆ ನಡೆಸಿರುವುದು ಗೊತ್ತಾಗಿದೆ. ಐಎಸ್ಐ ಮತ್ತು ಅನೇಕ ಭಯೋತ್ಪಾದನೆ ಸಂಟನೆಗಳ ನಾಯಕರ ನಡುವೆ ಇತ್ತೀಚೆಗೆ ಸಭೆ ನಡೆದಿದ್ದು, ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ದಾಳಿಗಳನ್ನು ಸಂಟಿಸಲು ಹಾಗೂ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಆಕ್ರಮಣಗಳನ್ನು ನಡೆಸಲು ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಮುಜಾರಾಬಾದ್ನಲ್ಲಿ ಸೆಪ್ಟೆಂಬರ್ 21ರಂದು ನಡೆದ ಸಭೆಯ ವಿವರಗಳು ಭಾರತೀಯ ಗುಪ್ತಚರ ದಳಗಳಿಗೆ ಲಭ್ಯವಾಗಿದೆ. ಕಾಶ್ಮೀರದ ಭಾರತೀಯ ಭಾಗದಲ್ಲಿ ಗರಿಷ್ಠ ಪ್ರಮಾಣದಲ್ಲಿ ಹತ್ಯೆಗಳನ್ನು ನಡೆಸಲು ಸಭೆ ನಿರ್ಧರಿಸಿದೆ ಎನ್ನಲಾಗಿದೆ.
ಯಾರು ಟಾರ್ಗೆಟ್?: ಪೊಲೀಸ್ ಇಲಾಖೆ, ಭದ್ರತಾ ಪಡೆಗಳು ಮತ್ತು ಬೇಹುಗಾರಿಕೆ ದಳಗಳಲ್ಲಿ ಕಾರ್ಯ ನಿರ್ವಹಿಸುವ ಕಾಶ್ಮೀರಿಗಳನ್ನು ಹುಡುಕಿ ಕೊಲ್ಲಬೇಕೆನ್ನುವುದು (ಟಾರ್ಗೆಟ್ ಕಿಲ್ಲಿಂಗ್) ಸಭೆಯ ನಿರ್ಧಾರವಾಗಿದೆ. ಕಾಶ್ಮೀರಿಯೇತರ ಮತ್ತು ಬಿಜೆಪಿ ಹಾಗೂ ಆರ್ಎಸ್ಎಸ್ನೊಂದಿಗೆ ಸಂಪರ್ಕವಿರುವ ಜನರೂ ಟಾರ್ಗೆಟ್ ಪಟ್ಟಿಯಲ್ಲಿ ಸೇರಲಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಭಯದ ವಾತಾವರಣ
ಸೃಷ್ಟಿಸಿ ಉದ್ವಿಗ್ನತೆ ಉಂಟು ಮಾಡಲು ಐಎಸ್ಐ 200 ಜನರ "ಹಿಟ್&ಲಿಸ್ಟ್' ತಯಾರಿಸಿದೆ. ಅದರಲ್ಲಿರುವವರನ್ನು ಕೊಲ್ಲುವುದು ಗುರಿಯಾಗಿದೆ. ಹೊಸದಾಗಿ ರಚಿಸಲಾಗುವ ಭಯೋತ್ಪಾದನೆ ಸಂಟನೆಗೆ ಟಾರ್ಗೆಟ್ ಕಿಲ್ಲಿಂಗ್ನ ಹೊಣೆ ವಹಿಸಲು ಸಭೆ ನಿರ್ಧರಿಸಿದೆ.
ನಾಗರಿಕರನ್ನು ಕೊಂದಿದ್ದ ಉಗ್ರನ ಹತ್ಯೆ
ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಉಗ್ರನನ್ನು ಪುಲ್ವಾಮಾದಲ್ಲಿ ಭದ್ರತಾ ಪಡೆ ಹತ್ಯೆ ಮಾಡಿದೆ. ಉಗ್ರ ವಹಿಬಾಗ್ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಈ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿತ್ತು.