

ಪ್ರಯಾಗ್ರಾಜ್: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಹಾಲಿ ನಡೆಯುತ್ತಿರುವ ಮಹಾಕುಂಭ ಮೇಳವು (Mahakumbh Mela) ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದ್ದು, ಪ್ರತಿನಿತ್ಯ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತರು ಇಲ್ಲಿಗೆ ಭೇಟಿ ನೀಡುವ ಮೂಲಕ ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮೌನಿ ಅಮಾವಾಸ್ಯೆಯಂದು ಕಾಲ್ತುಳಿತದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅಹಿತಕರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಕುಂಭಮೇಳಕ್ಕೆ (Mahakumbh Mela) ಭೇಟಿ ನೀಡುವ ಭಕ್ತರಿಗೆ ತಯಾರಿಸಲಾಗುತ್ತಿದ್ದ ಆಹಾರಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಬೂದಿ ಹಾಕಿರುವ ಘಟನೆ ವರದಿಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ತಪ್ಪಿತಸ್ಥ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ವಿಡಿಯೋವನ್ನು ಎಸ್ಪಿ ನಾಯಕ, ಸಂಸದ ಅಖಿಲೇಶ್ ಯಾದವ್ ಹಂಚಿಕೊಂಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಸೊರವಾನ್ ಪೊಲೀಸ್ ಠಾಣಾಧಿಕಾರಿ ಬ್ರಿಜೇಶ್ ತಿವಾರಿ ನೆಲದ ಮೇಲೆ ಬಿದ್ದಿರುವ ಬೂದಿಯನ್ನು ಭಕ್ತರಿಗಾಗಿ ತಯಾರಿಸಿರುವ ಅಡುಗೆಗೆ ಹಾಕಿ ಹೋಗುತ್ತಿರುವುದನ್ನು ನೋಡಬಹುದಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಯನ್ನು ಅಮಾನತು ಮಾಡಲಾಗಿದ್ದು, ಈ ವಿಚಾರವನ್ನು ಗಂಗಾನಗರ ಡಿಸಿಪಿ ಕುಲ್ದೀಪ್ ಸಿಂಗ್ ಗುಣವತ್ ಖಚಿತಪಡಿಸಿದ್ದು, ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಮೌನಿ ಅಮಾವಾಸ್ಯೆಯ ಪ್ರಯುಕ್ತ ಕುಂಭಮೇಳಕ್ಕೆ (Mahakumbh Mela) ಸಹಸ್ರಾರು ಭಕ್ತರು ಭೇಟಿ ನೀಡಿದ್ದು, ಕಾಲ್ತುಳಿತ ಸಂಭವಿಸಿದ ಪರಿಣಾಮ ಪೊಲೀಸರು ಕೆಲ ಸಮಯ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಸೊರವಾನ್ನ ಭಾವಾಪುರ ಟೋಲ್ ಪ್ಲಾಜಾ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾವನೆಗೊಂಡಿದ್ದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಗಮನಿಸಿದ ಸ್ಥಳೀಯರು ಅವರಿಗಾಗಿ ಅಡುಗೆ ತಯಾರಿಸಿದ್ದರು.
ಇದನ್ನು ಗಮನಿಸಿದ ಇನ್ಸ್ಪೆಕ್ಟರ್ ಬ್ರಿಜೇಶ್ ತಿವಾರಿ ಬೇರೆಡೆ ತೆರಳಿ ಅಡುಗೆ ಮಾಡುವಂತೆ ಸ್ಥಳೀಯರಿಗೆ ಸೂಚಿಸಿದ್ದಾರೆ. ಸ್ಥಳೀಯರು ತೆರಳಲು ನಿರಾಕರಿಸಿದಾಗ ಕುಪಿತಗೊಂಡ ಅಧಿಕಾರಿಯು ಅಡುಗೆಗೆ ಬೂದಿಯನ್ನು ಹಾಕಿದ್ದಾರೆ. ಸ್ಥಳೀಯರೊಬ್ಬರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಅಧಿಕಾರಿಯ ನಡೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.