ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

asha
ಗೌರವ ಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದರು. ರಾಜೇಶ್ವರಿ, ಸರಸ್ವತಿ, ರೇಣುಕಾ, ಚಂದ್ರಕಲಾ ಮುಂತಾದವರಿದ್ದರು.
Published on

ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮಂಗಳವಾರದಿಂದ ಮೂರು ದಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಮಂಗಳವಾರ ನಗರದ ಮಹಾವೀರ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು.

ಏಳು ತಿಂಗಳ ಹಿಂದೆ ರಾಜ್ಯದ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ನಾಲ್ಕು ದಿನಗಳ ಹೋರಾಟ ಕೈಗೊಂಡಾಗ, ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳು ಕೇಂದ್ರದ ಭಾಗಶಃ ಪ್ರೋತ್ಸಾಹಧನ ಮತ್ತು ರಾಜ್ಯದ ಗೌರವ ಧನಗಳನ್ನು ಕ್ರೋಡೀಕರಿಸಿ ಕನಿಷ್ಠ 10 ಸಾವಿರ ರೂ. ಗೌರವಧನ ನೀಡುತ್ತೇವೆ. ಇದನ್ನು ಬಜೆಟ್‌ನಲ್ಲಿ ಘೋಷಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದು ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಹೋರಾಟ ನಡೆದು 7 ತಿಂಗಳು ಕಳೆದ ಮೇಲೆ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದುಹಾಕಿ ಬೀದಿಪಾಲು ಮಾಡಲು ಸರ್ಕಾರ ಮುಂದಾಗಿದೆ. ಏಪ್ರಿಲ್‌ನಿಂದಲೇ ಅನ್ವಯವಾಗುವಂತೆ 10 ಸಾವಿರ ರೂ. ಗೌರವಧನ ಬಿಡುಗಡೆ ಮಾಡಬೇಕು. 2025ರ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಿಸಲಾಗಿದೆ. ಅದನ್ನು ಆಶಾ ಕಾರ್ಯಕರ್ತೆಯರಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಯಾವ ಕಾರಣಕ್ಕೂ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ಅವೈಜ್ಞಾನಿಕವಾಗಿ ನಮ್ಮ ಕೆಲಸದ ಸಾಮರ್ಥ್ಯ ಲೆಕ್ಕ ಹಾಕಬಾರದು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದವರಿಸಬೇಕು. ನಿವೃತ್ತರಾದವರಿಗೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಇಡುಗಂಟು ನೀಡಬೇಕು. ಕೇಂದ್ರ ಸರ್ಕಾರ ಹೆಚ್ಚಿಸಿದ ಆಶಾ ಪ್ರೋತ್ಸಾಹಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ನಗರ ಆಶಾ ಕಾರ್ಯಕರ್ತರಿಗೆ ಎರಡು ಸಾವಿರ ರೂ. ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಶಾಕಾರ್ಯಕರ್ತೆಯರು ಧರಣಿ ಮುಂದುವರಿಸಿದರು.

ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಪ್ರಮುಖರಾದ ಚಂದ್ರಕಲಾ, ಸರಸ್ವತಿ, ರೇಣುಕಾ ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net