ಆಶಾ, ಅಂಗನವಾಡಿ ಕಾರ್ಯರ್ತೆಯರು ಸಮಾಜದ ಅಂಬಾಸಿಡರ್ಸ್

work shop
ಕೋಲಾರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಶಾ, ಅಂಗನವಾಡಿ ಹಾಗೂ ಪೊಲೀಸ್ ಸಿಬ್ಬಂದಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಅಕ್ರಂಪಾಷಾ ಉದ್ಘಾಟಿಸಿದರು. ಬಿ.ನಿಖಿಲ್, ಡಾ.ಜಗದೀಶ್, ಎನ್.ನಾರಾಯಣಸ್ವಾಮಿ ಇದ್ದರು.
Published on

ಕೋಲಾರ: ಸಾಮಾಜಿಕ ಪೀಡುಗುಗಳನ್ನು ತೊಡೆದು ಹಾಕುವಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅದ್ದರಿಂದ ಅವರೆಲ್ಲರೂ ಸಮಾಜದ ಅಂಬಾಸಿಡರ್ಸ್ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಬಣ್ಣಿಸಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಕಾನೂನು ಸೇವೆಗಳ ಪ್ರಾಽಕಾರದ ಸಹಯೋಗದಲ್ಲಿ ಮಂಗಳವಾರ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿಗೆ ಏರ್ಪಡಿಸಿದ್ದ ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಪೋಕ್ಸೋ ಕಾಯ್ದೆ-2012 ಹಾಗೂ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಮಕ್ಕಳ ಸಂರಕ್ಷಣೆ ಕಾನೂನುಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿ ತಾಲೂಕುವಾರು ಕಾರ್ಯಾಗಾರ ಆಯೋಜಿಸಿ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲಾಗುವುದು. ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಜಾಗೃತಿ ಮೂಡಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ಬಾಲ್ಯ ವಿವಾಹ ತಡೆಯಲು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ನಿಮ್ಮಂದ ಸಾಧ್ಯ ಎಂದರು.
ದೌರ್ಜನ್ಯ, ಅತ್ಯಾಚಾರ, ಅಹಿತಕರ ಘಟನೆಗಳು ಎಲ್ಲಿ ನಡೆಯುತ್ತಿವೆ ಎಂಬುದು ತಿಳಿದಿರುತ್ತದೆ. ಆ ಜಾಗಕ್ಕೆ ತೆರಳಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ರಕ್ಷಣೆಗಾಗಿ ಜಾರಿಗೆಯಾಗಿರುವ ಕಾನೂನುಗಳ ಉದ್ದೇಶ ಈಡೇರಬೇಕು. ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅಹಿತಕರ ಘಟನೆಗಳಿಂದ ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಪ್ರತಿಯೊಂದು ಇಲಾಖೆಯವರು ಕೈ ಜೋಡಿಸಬೇಕು ಎಂದು ಕೋರಿದರು.
ಬಾಲ್ಯ ವಿವಾಹ, ಮಕ್ಕಳಿಂದ ದುಡಿಸಿಕೊಳ್ಳುವವರ ಬಗ್ಗೆ ದೂರು ನೀಡುವವರ ಹೆಸರನ್ನು ಗೌಪ್ಯವಾಗಿಟ್ಟು ತಪ್ಪಿತಸ್ಥರ ವಿರುದ್ಧ ಕ್ರಮವಹಿಸಲಾಗುವುದು. ಇದರಿಂದ ಅಪರಾಧಗಳನ್ನು ತಡೆಯಬಹುದು, ಸಾರ್ವಜನಿಕರು ಹಿಂಜರಿಕೆಯಿಲ್ಲದೆ ದೂರು ನೀಡಲು ಮುಂದಾಗಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಮಾತನಾಡಿ, ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರೂ ಸಹ ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ಇರುವುದು ವಿಷಾದಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಬಾಲ್ಯವಿವಾಹ, ಬಾಲಕಾರ್ಮಿಕ ಪ್ರಕರಣಗಳು ಕಂಡುಬಂದಲ್ಲಿ ಸಹಾಯವಾಣಿ 1098ಗೆ ಕರೆಮಾಡಿ ಮಾಹಿತಿ ನೀಡಬೇಕು. ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ತಾಯಿ ಮಗುವಿನ ಜೀವಕ್ಕೆ ದೊಡ್ಡ ಅಪಾಯಗಳಿರುತ್ತವೆ. ಹುಟ್ಟುವಂತಹ ಮಕ್ಕಳು ಕೂಡ ಅಪೌಷ್ಠಿಕತೆ ಹೊಂದಿರುತ್ತಾರೆ, ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎನ್.ನಾರಾಯಣಸ್ವಾಮಿ, ಬಾಲ್ಯವಿವಾಹದ ಜಿಲ್ಲಾ ನೋಡಲ್ ಅಽಕಾರಿ ವಂಶಿಕೃಷ್ಣ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ರಕ್ಷಣಾಧಿಕಾರಿ ವಿ.ನಾಗರತ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net