ಹೈಟೆಕ್ ದಾಳಿ ಶತಃಸಿದ್ಧ: ಇರಾನ್ ಪ್ರತೀಕಾರ ಬೆದರಿಕೆಗೆ ಟ್ರಂಪ್ ತಿರುಗೇಟು

Trump 1
Published on

ವಾಷಿಂಗ್ಟನ್: ಇರಾನ್ ಸೇನಾ ಕಮಾಂಡರ್ ಕಾಸಿಂ ಸುಲೇಮಾನಿಯನ್ನು ಹತ್ಯೆಗೈದಿರುವ ಅಮೆರಿಕದ ಮೇಲೆ ಪ್ರತೀಕಾರದ ದಾಳಿಗೆ ಮುಂದಾದರೆ, ಅತ್ಯಾಧುನಿಕ ತಂತ್ರಜ್ಞಾನದ ಆಯುಧಗಳ ಮೂಲಕ ಶತ್ರುಗಳ ಹುಟ್ಟಡಗಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳದೇ ಇರುವುದಿಲ್ಲ, ಅಮೆರಿಕದ ನೆಲೆಗಳ ಗತಿ ಏನಾಗುವುದೆಂಬುದನ್ನು ನೋಡುತ್ತೀರಿ ಎಂದು ಇರಾನ್ ಒಡ್ಡಿರುವ ಬೆದರಿಕೆಗೆ ಪ್ರತಿಕ್ರಿಯಿಸಿ ಟ್ರಂಪ್ ಸರಣಿ ಟ್ವೀಟ್ ಮಾಡಿದ್ದಾರೆ.

‘ನಮ್ಮ ನೆಲೆಗಳಿಗೆೆ ಹಾನಿಯಾದರೆ, ಮರುಕ್ಷಣವೇ ಇರಾನ್ ನಿರ್ನಾಮ ಆರಂಭವಾಗುತ್ತದೆ. ಇರಾನ್​ನಲ್ಲಿ 52 ನೆಲೆಗಳನ್ನು ಈಗಾಗಲೇ ಗುರುತಿಸಿದ್ದೇವೆ. ಈ ಮೂಲಕ ಅಮೆರಿಕದ ಬೆದರಿಕೆಯೊಂದು ಶಾಶ್ವತವಾಗಿ ದೂರವಾಗುತ್ತದೆ’ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಶನಿವಾರ ತಡರಾತ್ರಿ ಬಾಗ್ದಾದ್​ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಬಳಿ ಎರಡು ಸುತ್ತು ಮಾರ್ಟರ್ ಷೆಲ್ ಮತ್ತು ಅಲ್-ಬಲದ್ ಅಮೆರಿಕದ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಇದರಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಇರಾನ್ ಸೇನೆ ಹೇಳಿದೆ.

ಈ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತಿಲ್ಲವಾದರೂ ಭಾನುವಾರ ಸಂಜೆಯೊಳಗೆ ಅಮೆರಿಕದ ಸೇನೆಯಿಂದ ದೂರವಿರಿ ಎಂದು ದೇಶದ ಜನತೆಗೆ ಹಾಶೆದ್ ಅಲ್-ಶಹಾಬಿ ಸಂಘಟನೆ ಹೇಳಿದೆ. ಗುರುವಾರ ತಡರಾತ್ರಿ ಡ್ರೋನ್ ಮೂಲಕ ಅಮೆರಿಕದ ವಾಯುಪಡೆ ನಡೆಸಿದ ದಾಳಿಯಲ್ಲಿ ಕಾಸಿಂ ಸುಲೇಮಾನಿ ಸೇರಿ ಇರಾನ್​ನ ರೆವಲೂಷನರಿ ಗಾರ್ಡ್ಸ್​ನ ಐವರು ಮತ್ತು ಹಾಶೆದ್ ಸಂಘಟನೆಯ ಐವರು ಹತರಾಗಿದ್ದರು.

ಅಮೆರಿಕದಲ್ಲಿ ವಿರೋಧ: ಇರಾನ್​ನಲ್ಲಿ ನಡೆದ ವೈಮಾನಿಕ ದಾಳಿ ಕುರಿತಂತೆ ಅಮೆರಿಕದಲ್ಲೂ ವಿರೋಧ ವ್ಯಕ್ತವಾಗಿದೆ. ಈ ದಾಳಿಯ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. ದಾಳಿ ನಡೆದ ಸಮಯ, ರೀತಿ ಮತ್ತು ಅಗತ್ಯತೆ ಬಗ್ಗೆ ಅಧ್ಯಕ್ಷರು ಉಭಯ ಸದನಗಳಿಗೆ ಸ್ಪಷ್ಟಪಡಿಸಬೇಕು ಎಂದು ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ. ಡೆಮಾಕ್ರಟಿಕ್​ನ ನಾಯಕಿ ಅಲೆಕ್ಸಾಂಡ್ರಿಯಾ ಒಕಾಸಿಯೊ ಕಾರ್ಟೆಜ್ ಪ್ರತಿಕ್ರಿಯೆ ನೀಡಿ, ಇದು ಯುದ್ಧಾಪರಾಧ. ಮುಗ್ಧ ಕುಟುಂಬಗಳನ್ನು ಮಹಿಳೆಯರು, ಮಕ್ಕಳನ್ನು ಗುರಿಯಾಗಿರಿಸಿಕೊಳ್ಳುವುದು ರಾಕ್ಷಸಿತನ. ಇದನ್ನು ಅಧ್ಯಕ್ಷರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಸೇನಾ ಜನರಲ್ ಹೊಡೆದುರುಳಿಸಿರುವುದು ಪ್ರತ್ಯಕ್ಷ ಯುದ್ಧದ ಆಹ್ವಾನವಾಗಿದೆ. ಇರಾನ್ ಗುಂಪುಗಳು ಪ್ರತೀಕಾರಕ್ಕಾಗಿ ತಹತಹಿಸುತ್ತಿವೆ ಎಂದು ನ್ಯೂ ಅಮೆರಿಕನ್ ಫೌಂಡೇಷನ್​ನ ಎರಿಕಾ ಗ್ಯಾಸ್ಟನ್ ಹೇಳಿದ್ದಾರೆ.

ಉಗ್ರವಾದ ನಡೆಸಿದ ಕಾರಣಕ್ಕೆ ಇರಾನ್ ಸೇನಾ ಕಮಾಂಡರ್​ನನ್ನು ಹತ್ಯೆ ಮಾಡಿರುವ ಅಮೆರಿಕ, ಇಂಥದ್ದೇ ಕ್ರಮವನ್ನು ಪಾಕ್ ಸೇನಾ ಜನರಲ್ ವಿರುದ್ಧ ಏಕೆ ಕೈಗೊಂಡಿಲ್ಲ. ಪಾಕ್ ಜನರಲ್ ವಿರುದ್ಧ ವಿಧ್ವಂಸಕ ಕೃತ್ಯಕ್ಕೆ ಕುಮ್ಮಕ್ಕು ನೀಡಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. | ಸಾದ್ ಮೊಹ್ಸೆನಿ ಅಮೆರಿಕದಲ್ಲಿರುವ ಆಫ್ಘನ್ ಮೂಲದ ಉದ್ಯಮಿ

ವೆಬ್​ಸೈಟ್ ಹ್ಯಾಕ್

ಇರಾನ್ ಮತ್ತು ಆ ರಾಷ್ಟ್ರದ ಪರವಾಗಿರುವ ಗುಂಪುಗಳು ಅಮೆರಿಕ ನೆಲೆಗಳನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕುತ್ತಿವೆ. ಇದಕ್ಕೆ ಅಮೆರಿಕ ಕೂಡ ತಿರುಗೇಟು ನೀಡುತ್ತಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಆದರೆ, ಟೆಹರಾನ್​ನಲ್ಲಿ ಎಲ್ಲಿ? ಯಾವ ರೀತಿಯ ದಾಳಿ ನಡೆಸುತ್ತದೆ ಎಂಬುದು ವಾಷಿಂಗ್ಟನ್ ಎಣಿಕೆಗೆ ಸಿಗುತ್ತಿಲ್ಲ. ಹೀಗಾಗಿ ಆಂತರಿಕ ಭದ್ರತಾ ಇಲಾಖೆ, ನಿರ್ದಿಷ್ಟ ಮತ್ತು ನಂಬಬಹುದಾಗಿಲ್ಲದ ಬೆದರಿಕೆಗಳಿಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ವಾರ್ತಾಪತ್ರದಲ್ಲಿ ತಿಳಿಸಿದೆ. ಈ ಮಧ್ಯೆ, ಅಮೆರಿಕದ ಫೆಡರಲ್ ಡಿಪಾಸಿಟರಿ ಲೈಬ್ರರಿ ಕಾರ್ಯಕ್ರಮದ ವೆಬ್​ಸೈಟ್ ಹ್ಯಾಕ್ ಮಾಡಲಾಗಿದ್ದು, ಸುಲೇ ಮಾನಿ ಹತ್ಯೆಗೆ ಪ್ರತೀಕಾರ ತೀರಿಸಿ ಕೊಳ್ಳುವುದಾಗಿ ಎಚ್ಚರಿಸಿ ಇರಾನ್ ಬಾವುಟ, ಗ್ರಾಫಿಕ್ಸ್ ಹಾಕಲಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಅತ್ಯಂತ ಗಂಭೀರ ತಿರುವು ಪಡೆದುಕೊಂಡಿದೆ. ಈ ಉದ್ವಿಗ್ನತೆಯನ್ನು ಭಾರತ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇರಾನ್ ವಿದೇಶಾಂಗ ಸಚಿವಾಲಯದ ಜತೆ ಸತತ ಸಂಪರ್ಕದಲ್ಲಿದ್ದೇವೆ. | ಎಸ್.ಜೈಶಂಕರ್ ವಿದೇಶಾಂಗ ಸಚಿವ

ಅಂತ್ಯಕ್ರಿಯೆ ರದ್ದು?

ಅಮೆರಿಕದ ದಾಳಿಯಲ್ಲಿ ಸಾವನ್ನಪ್ಪಿದ ಸೇನಾ ಕಮಾಂಡರ್ ಕಾಸಿಂ ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ವಿಪರೀತ ಜನಜಂಗುಳಿ ಉಂಟಾದ ಕಾರಣ ಮತ್ತು ದೇಶದ ಇತರೆಡೆಗಳಿಂದ

ಜನರು ಟೆಹರಾನ್​ಗೆ ಬರುತ್ತಿರುವ ಕಾರಣ ಭಾನುವಾರ ನಡೆಯಬೇಕಿದ್ದ ಅಂತ್ಯಕ್ರಿಯೆಯನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇರಾನ್ ಎರಡನೇ ದೊಡ್ಡ ನಗರವಾದ ಮಶಾದ್​ನಲ್ಲೂ ಅಪಾರ ಜನಸ್ತೋಮ ಸೇರಿತ್ತು ಎಂದು ರೆವಲೂಷನರಿ ಗಾರ್ಡ್ಸ್ ಹೇಳಿದೆ.

ನಮ್ಮ ಬಳಿ ಹೊಚ್ಚ ಹೊಸ ಮತ್ತು ಅತಿ ಸುಂದರವಾದ ಸಾಧನವಿದೆ. ಇರಾನ್ ಧೋರಣೆ ಇದೇ ರೀತಿ ಮುಂದುವರಿದರೆ ಇದನ್ನು ಬಳಸಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಸೇನೆಯ ಕಮಾಂಡರ್ ಕಾಸಿಂ ಸುಲೇಮಾನಿ ಹತ್ಯೆಗೆ ಪ್ರತೀಕಾರ ಖಚಿತ ಎಂದು ಆಯಾತೊಲ್ಲಾ ಅಲಿ ಖಮೇನಿ ನೀಡಿರುವ ಭರವಸೆ ಸುಳ್ಳಾಗದು. | ಇಸ್ಮಾಯಿಲ್ ಖಾನಿ ಇರಾನ್ ರೆವಲೂಷನರಿ ಗಾರ್ಡ್ಸ್​ನ ನೂತನ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net