

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚೊಚ್ಚಲ ಗಗನಯಾನದ ಭಾಗವಾಗಿ ಮೊದಲ ಮಾನವ ರಹಿತ ಮಿಷನ್ ಈ ವರ್ಷ ಡಿಸೆಂಬರ್ನಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಬುಧವಾರ ಹೇಳಿದ್ದಾರೆ.
'ಹ್ಯೂಮನ್ ಸ್ಪೇಸ್ಲೈಟ್ ಆ್ಯಂಡ್ ಎಕ್ಸ್ಪ್ಲೋರೇಷನ್- ಪ್ರಸೆಂಟ್ ಚಾಲೆಂಜಸ್ ಆ್ಯಂಡ್ ಫ್ಯೂಚರ್ ಟ್ರೆಂಡ್ಸ್' ಕುರಿತ ಸಿಂಪೋಸಿಯಂನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಚಂದ್ರಯಾನ 2021ರ ಡಿಸೆಂಬರ್ನಲ್ಲಿ ನಡೆಸಲು ಉದ್ದೇಶಿಸಿದ್ದು, ಅದಕ್ಕೂ ಪೂರ್ವಭಾವಿಯಾಗಿ ಎರಡು ಮಾನವರಹಿತ ಮಿಷನ್ಗಳನ್ನು 2020ರ ಡಿಸೆಂಬರ್ ಮತ್ತು 2021ರ ಜೂನ್ನಲ್ಲಿ ನಿರ್ವಹಿಸಲಾಗುವುದು ಎಂದು ವಿವರಿಸಿದರು.
ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಭವಿಷ್ಯದ ಅಗತ್ಯಗಳನ್ನು ಪೂರೈಸುವ ಸಲುವಾಗಿ ಪೂರ್ಣ ಪ್ರಮಾಣದ ಆಸ್ಟ್ರೋನಾಟ್ ಟ್ರೇನಿಂಗ್ ಫೆಸಿಲಿಟಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.ನಾಸಾ ಮತ್ತು ಇತರ ಬಾಹ್ಯಾಕಾಶ ಕೇಂದ್ರಗಳ ಜತೆಗೆ ಸಂಪರ್ಕದಲ್ಲಿದ್ದು, ಅವರ ಅನುಭವವನ್ನೂ ಪಡೆದುಕೊಳ್ಳುತ್ತ ನಮ್ಮ ಕೆಲಸ ಮುಂದುವರಿಸಿದ್ದೇವೆ.ಈ ಗಗನಯಾನ ಪ್ರಾಜೆಕ್ಟ್ ನಮ್ಮ ಇಂಟರ್ ಪ್ಲಾನೆಟರಿ ಮಿಷನ್ ಆಗಿದ್ದು, ದೀರ್ಘಾವಧಿಯ ಕಾರ್ಯಸೂಚಿಯನ್ನು ಹೊಂದಿದೆ ಎಂದು ಶಿವನ್ ಹೇಳಿದರು.(ಏಜೆನ್ಸೀಸ್)