ಕಾಶ್ಮೀರದಲ್ಲಿ ಸದ್ಯಕ್ಕಿಲ್ಲ ಅಸೆಂಬ್ಲಿ ಚುನಾವಣೆ

ವಿಜಯವಾಣಿ-_14_
Published on

ಕಣಿವೆ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮಾತ್ರ ನಡೆಸಲು ಆಯೋಗ ನಿರ್ಧಾರ

ಜಮ್ಮು-ಕಾಶ್ಮೀರದ 5 ಲೋಕಸಭೆ ಕ್ಷೇತ್ರಗಳಿಗೆ ಮೊದಲ 5 ಹಂತಗಳಲ್ಲಿ ಒಂದೊಂದಾಗಿಯೇ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ವನಿಸಿದೆ. ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ ಘೊಷಿಸಬೇಕು ಎಂದು ಜೆ-ಕೆಯ ವಿವಿಧ ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಸೆಪ್ಟೆಂಬರ್ ಒಳಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಕೂಡ ಗಡುವು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಪೂರ್ಣಗೊಂಡ ನಂತರ ಇಲ್ಲಿ ವಿಧಾನಸಭೆ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದರ ಹಿಂದೆ ಏನೋ ಮಸಲತ್ತಿದೆ ಎಂದ ಫಾರೂಖ್ ಅಬ್ದುಲ್ಲಾ

ಶ್ರೀನಗರ: ಲೋಕಸಭಾ ಚುನಾವಣೆ ಜತೆಗೆ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸದಿರುವುದರ ಹಿಂದೆ ‘ಏನೋ ಮಸಲತ್ತಿದೆ’ ಎಂದು ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ, ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ. ‘ಒಂದು ದೇಶ ಒಂದು ಚುನಾವಣೆ’ ಜಾರಿ ಮಾಡಲು ಹೊರಟಿರುವ ಬಿಜೆಪಿಗೆ ಇಲ್ಲಿ ಒಂದು ಅವಕಾಶ ಇತ್ತು. ಲೋಕಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಲು ವಾತಾವರಣ ಸರಿಯಿದೆ ಎಂದಾದರೆ, ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ವಿಧಾನಸಭೆ ಚುನಾವಣೆ ನಡೆಸುವಂತೆ ಕೇಳಿಕೊಂಡಿದ್ದರೂ ನಡೆಸದಿರುವುದರ ಹಿಂದೆ ಯಾವುದೋ ದುರುದ್ದೇಶ ಇದ್ದಂತಿದೆ. ಬೇರೆ 4 ರಾಜ್ಯಗಳಲ್ಲಿ ಒಟ್ಟಿಗೇ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುತ್ತಿರುವಾಗ ಇಲ್ಲಿ ಏಕೆ ಸಾಧ್ಯವಾಗುವುದಿಲ್ಲ? ನಾವು ಲೆಫ್ಟಿನೆಂಟ್ ಗವರ್ನರ್ ಆಡಳಿತವನ್ನು ಇನ್ನು ಎಷ್ಟು ದಿನ ಸಹಿಸಿಕೊಂಡಿರಬೇಕು? ಜನರ ಹೃದಯ ಗೆಲ್ಲಬೇಕೆಂದರೆ ಚುನಾವಣೆ ನಡೆಸಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಸಮರ್ಥನೆ

ಕಾಂಗ್ರೆಸ್, ಪಿಡಿಪಿ ಸೇರಿದಂತೆ ಕಾಶ್ಮೀರದ ಇತರ ಪಕ್ಷಗಳೂ ಅಲ್ಲಿ ವಿಧಾನಸಭೆ ಚುನಾವಣೆ ನಡೆಸದಿರುವ ಆಯೋಗದ ನಿಲುವನ್ನು ಖಂಡಿಸಿವೆ. ಆದರೆ ಬಿಜೆಪಿ ಮಾತ್ರ ವಿಧಾನಸಭೆ ಚುನಾವಣೆ ನಡೆಸದಿರುವ ಕ್ರಮವನ್ನು ಸ್ವಾಗತಿಸಿದೆ. ‘ನಾವು ಕೂಡ ಲೋಕಸಭಾ ಚುನಾವಣೆ ಜತೆಗೇ ವಿಧಾನಸಭಾ ಚುನಾವಣೆ ನಡೆಸಬೇಕೆಂದು ಆಯೋಗಕ್ಕೆ ಒತ್ತಾಯಿಸಿದ್ದೆವು. ಆದರೆ ಭದ್ರತಾ ಕಾರಣಗಳಿಂದಾಗಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿರಬಹುದು. ಅದಕ್ಕೆ ನಮ್ಮ ಬೆಂಬಲವಿದೆ’ ಎಂದು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.

ರಾಜಕೀಯ ದೇಣಿಗೆ ಗೌಪ್ಯತೆ ಅಗತ್ಯ

ನವದೆಹಲಿ: ರಾಜಕೀಯ ಪಕ್ಷಗಳಿಗೆ ನೀಡಲಾಗುವ, ಲೆಕ್ಕಕ್ಕೆ ಸಿಗದ ದೇಣಿಗೆಗಳ ಬಗ್ಗೆ ಪರಿಶೀಲನೆ ನಡೆಸುವ ವ್ಯವಸ್ಥೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್​ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ, ದೇಣಿಗೆ ನೀಡುವ ದಾನಿಗಳ ಗೌಪ್ಯತೆಯನ್ನೂ ಕಾಪಾಡಬೇಕಿದೆ. ಏಕೆಂದರೆ ಮುಂದೆ ಅವರು ಇತರರಿಂದ ಮಾನಸಿಕ ಹಿಂಸೆ, ಒತ್ತಡ, ಕಿರಿಕಿರಿಗೆ ಗುರಿಯಾಗಬಾರದು. ಅದಕ್ಕಾಗಿ ಗೌಪ್ಯತೆ ಅಗತ್ಯ. ಚುನಾವಣಾ ಬಾಂಡ್ ಗೆ ಸಂಬಂಧಿಸಿದಂತೆ ಪಾರದರ್ಶಕತೆ ಇರಬೇಕು ಎನ್ನುವುದು ಆಯೋಗದ ನಿಲುವಾಗಿದೆ ಎಂದವರು ವಿವರಿಸಿದ್ದಾರೆ. ಪ್ರಜಾಪ್ರಭುತ್ವ ದಲ್ಲಿ ನೀವು ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಪಾರದರ್ಶಕತೆ ಇಲ್ಲಿ ಅಗತ್ಯ. ನಾವು ಅದನ್ನು ಬೆಂಬಲಿಸು ತ್ತೇವೆ. ಆದರೆ, ದಾನಿಗಳ ಗೌಪ್ಯತೆ ಕಾಪಾಡುವುದಕ್ಕೂ ಈ ದೇಶ ವ್ಯವಸ್ಥೆಯೊಂದನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ಲೆಕ್ಕ ನೀಡದ ಅಕ್ರಮ ಹಣವನ್ನು ಚುನಾವಣೆಯಲ್ಲಿ ಬಳಸಲಾಗುತ್ತದೆ. ಅದನ್ನು ತಡೆಯಲು ನಾವು ಪ್ರಯತ್ನಿಸುತ್ತಲೇ ಇರುತ್ತೇವೆ. ಆದರೆ ಲೆಕ್ಕಕ್ಕೆ ಸಿಗದ ರಾಜಕೀಯ ದೇಣಿಗೆಯನ್ನು ಪರಿಶೀಲಿಸುವುದು ಹೇಗೆ ಎಂಬುದಕ್ಕೂ ನಾವು ಮಾರ್ಗ ಕಂಡುಕೊಳ್ಳಬೇಕು. ಇದಕ್ಕೆ ಆಡಳಿತ ವ್ಯವಸ್ಥೆ ಸೇರಿ ಎಲ್ಲಾ ಪಾಲುದಾರರು ಚಿಂತನೆ ನಡೆಸಬೇಕು ಎಂದು ಕುಮಾರ್ ಸಲಹೆ ನೀಡಿದ್ದಾರೆ. ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತ್ತು.

ಬಿಜೆಪಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಸಿಎಂ ಒತ್ತಾಯ

ಬೆಂಗಳೂರು: ಸುಪ್ರೀಂ ಕೋರ್ಟ್ ಉನ್ನತಾಧಿಕಾರದ ಸಮಿತಿಯನ್ನು ರಚಿಸಿ ಚುನಾವಣಾ ಬಾಂಡ್ ಹಗರಣದ ತನಿಖೆ ನಡೆಸಬೇಕು ಮತ್ತು ಅಲ್ಲಿಯವರೆಗೆ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಚುನಾವಣಾ ಬಾಂಡ್ ಸುಲಿಗೆ ಬಗ್ಗೆ ಬಿಜೆಪಿ ಯಾಕೆ ಮೌನವಾಗಿದೆ? ಸ್ವಿಸ್ ಬ್ಯಾಂಕ್​ನಲ್ಲಿರುವ ಕಪ್ಪುಹಣ ತಂದು ಜನರಿಗೆ ಹಂಚುತ್ತೇವೆ, ನೋಟ್ ಬ್ಯಾನ್ ಮಾಡಿ ಕಪ್ಪುಹಣದ ಮೂಲೋತ್ಪಾಟನೆ ಮಾಡುತ್ತೇವೆ, ನಾ ಖಾವೂಂಗಾ - ನಾ ಖಾನೆ ದೂಂಗಾ, ದೇಶದ ಸಂಪತ್ತಿಗೆಲ್ಲ ನಾನೇ ಚೌಕಿದಾರ ಎಂದೆಲ್ಲ ಹೇಳಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿಯವರೇ ಕನಿಷ್ಠ ಚುನಾವಣಾ ಬಾಂಡ್ ಹಗರಣದ ಬಗ್ಗೆಯಾದರೂ ಉತ್ತರಿಸಿ ಎಂದು ಆಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಭಾರತೀಯ ಸ್ಟೇಟ್ ಬ್ಯಾಂಕ್ ಸಂಪೂರ್ಣ ಮಾಹಿತಿ ನೀಡಲು ಯಾಕೆ ಹಿಂಜರಿಯುತ್ತಿದೆ? ಚುನಾವಣಾ ಬಾಂಡ್​ಗಳ ಮಾರಾಟ ಮತ್ತು ಖರೀದಿ ವ್ಯವಹಾರ ಕಾನೂನುಬದ್ಧವಾಗಿ ನಡೆದಿದ್ದರೆ ಎಸ್​ಬಿಐ ಯಾಕೆ ಮಾಹಿತಿ ಮುಚ್ಚಿಡಲು ಪ್ರಯತ್ನಿಸುತ್ತಿದೆ? ಎಸ್​ಬಿಐ ಮೇಲೆ ಒತ್ತಡ ಹೇರುತ್ತಿರುವವರು ಯಾರು? ಪ್ರಧಾನಿ ನರೇಂದ್ರ ಮೋದಿ ಅವರೇ ದಯವಿಟ್ಟು ಉತ್ತರಿಸಿ ಎಂದಿದ್ದಾರೆ.

ಇವಿಎಂ ದೂಷಣೆಗೆ ಬೇಸರ

ಇವಿಎಂ ಸರಿ ಇಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ಕೊನೆಯೇ ಇಲ್ಲದಾಗಿದೆ. ಕೋರ್ಟಿನಲ್ಲಿ ಕೇಸುಗಳ ಮೇಲೆ ಕೇಸುಗಳನ್ನು ದಾಖಲಾಗುತ್ತಲೇ ಇರುತ್ತದೆ. ನಾವು ಎಷ್ಟು ಬಾರಿ ಸತ್ಯ ಸಾಬೀಪಡಿಸಿದರೂ ಕೆಲವರಿಗೆ ಅದು ಒಪ್ಪಿಗೆಯಾಗುವುದೇ ಇಲ್ಲ ಎಂದು ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಬೇಸರ ಹೊರಹಾಕಿದರು. ಈ ಬಗ್ಗೆ ತಾವು ಬರೆದ ಹಿಂದಿ ಕವಿತೆ ಮೂಲಕ ರಾಜಕೀಯ ಪಕ್ಷಗಳ ಕಾಲೆಳೆದ ಅವರು, ನಿಮ್ಮ ಆಸೆ ಈಡೇರದ್ದಕ್ಕೆ ನನ್ನ (ಇವಿಎಂ) ಮೇಲೆ ದೂಷಿಸುವುದು ಸರಿಯಲ್ಲ. ನಂಬಿಕೆ ಉಳಿಸಿಕೊಳ್ಳುವುದಕ್ಕೆ ನೀವಂತೂ ಗ್ಯಾರಂಟಿ ನೀಡುವುದಿಲ್ಲ. ಹೀಗಿದ್ದರೂ, ಇವಿಎಂನ್ನು ದೂಷಿಸುವುದು ನಿಲ್ಲಿಸುವುದಿಲ್ಲ. ಫಲಿತಾಂಶ ಬಂದ ಮೇಲೂ ನೀವು ನನ್ನನ್ನು ದೂಷಿಸುವುದನ್ನು ಮುಂದುವರಿಸುತ್ತೀರಿ ಎಂದಾಗ ಸುದ್ದಿಗೋಷ್ಠಿ ನಡೆದ ವಿಜ್ಞಾನ ಭವನ ನಗೆಗಡಲಲ್ಲಿ ತೇಲಿತು.

ಲೋಕಸಭೆ ಚುನಾವಣೆ ಬಳಿಕ ಜಮ್ಮು- ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ- ರಾಜೀವ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತ https://www.vijayavani.net/prathap-simha-about-his-upcoming-presence

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net