ನಾನಿನ್ನೂ ತಿರುಪತಿಗೆ ಹೋಗಿಲ್ಲ ಏಕೆ ಗೊತ್ತಾ? ಮೈಸೂರು ರಾಜವಂಶಸ್ಥ ಯದುವೀರ್ ಹೇಳಿದ್ದೇನು?

Abhijnana
Published on

ಬೆಂಗಳೂರು ಭಾರತದ ಗತಕಾಲದ ವೈಭವವನ್ನು ಮರಳಿ ತರುವುದು ಕೇಂದ್ರ ಸರ್ಕಾರದ ‘ವಿಕಸಿತ ಭಾರತ’ ಯೋಜನೆಯ ಉದ್ದೇಶವಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅಭಿಜ್ಞಾನ ಪ್ರಕಟಣೆಯು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೇಖಕ ಸಾ.ಕೃ. ರಾಮಚಂದ್ರರಾವ್ ಅವರ ರಚನೆಯ ‘ತಿರುಪತಿ ತಿಮ್ಮಪ್ಪ’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ವಿಕಸಿತ ಭಾರತ’ವು ಕೇವಲ ಇಂದು, ನಾಳೆ ಅಥವಾ 5 ವರ್ಷಕ್ಕೆ ಸೀಮಿತವಾಗಿಲ್ಲ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸುವುದಾಗಿದೆ. ಪ್ರಸ್ತುತತೆ ತಕ್ಕಂತೆ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಮೂಲಕ ದೇಶವು ಗತಕಾಲದ ವೈಭವಕ್ಕೆ ಮರಳಿಸುವುದಾಗಿದೆ. ತರ್ಕಶಾಸ, ಧರ್ಮದ ಆಧಾರದಲ್ಲಿ ಮುಂದುವರಿದಾಗ ಎಲ್ಲದಕ್ಕೂ ಪರಿಹಾರ ಸಿಗಲಿದೆ ಎಂದರು.

ನಾನಿನ್ನೂ ತಿರುಪತಿಗೆ ಹೋಗಿಲ್ಲ:

ಮೈಸೂರು ರಾಜವಂಶಸ್ಥರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ತಿರುಪತಿಯಲ್ಲಿ ಪಲ್ಲವೋತ್ಸವ ಆರಂಭವಾಯಿತು. ಅದೇ ದಿನ ಅಂದರೆ, ಆಷಾಢ ಮಾಸದ ರೇವತಿ ನಕ್ಷತ್ರದಲ್ಲಿ ಚಾಮುಂಡಿ ಬೆಟ್ಟದಲ್ಲಿಯೂ ವರ್ಧಂತಿ ಉತ್ಸವ ನಡೆಯಲಿದೆ. ಕಳೆದ 9 ವರ್ಷದಿಂದಲೂ ಚಾಮುಂಡಿ ಬೆಟ್ಟದಲ್ಲಿಯೇ ಭಾಗಿಯಾಗುತ್ತಿರುವ ಕಾರಣ ತಿರುವಪತಿಗೆ ಹೋಗಲು ಸಾಧ್ಯವಾಗಿಲ್ಲ. ಯಾವಾಗ ಆ ಅವಕಾಶ ಮತ್ತು ಸೌಲಭ್ಯ ಸಿಗುತ್ತದೆ ಎಂದು ನೋಡೋಣವೆಂದು ಹೇಳಿದರು.

ಮೈಸೂರು ರಾಜರ ಮೇಲೆ ವೈಷ್ಣವ ಪರಂಪರೆಯು ದೊಡ್ಡ ಪರಿಣಾಮ ಬೀರಿದೆ. ಅರಸರ ಒಳ್ಳೆಯ ಕೆಲಸಗಳಿಗೆ ಬಾಲಾಜಿ ಹಾಗೂ ತಾಯಿ ಚಾಮುಂಡೇಶ್ವರಿ ಆಶೀರ್ವಾದಿಂದಲೇ ಆಗಿವೆ. ಮುಂದಿನ ದಿನಗಳಲ್ಲಿಯೂ ಇದು ಮುಂದುವರಿಯಲಿವೆ ಎಂದು ಭರವಸೆ ನೀಡಿದರು.

ಭಕ್ತಿ ಜತೆಗೆ ಜ್ಞಾನ ಮುಖ್ಯ:

ದೇವಾಲಯದಲ್ಲಿ ದೇವರ ಆಶೀರ್ವಾದ ಪಡೆಯುವುದು ಒಂದೆಡೆಯಾದರೆ, ಪುಸ್ತಕಗಳಿಂದ ದೊರೆಯುವ ತಿಳಿವಳಿಕೆ ಈ ತಲೆಮಾರಿನ ಜನರಿಗೆ ಅತ್ಯಗತ್ಯವಾಗಿ ಬೇಕಿದೆ. ಭಕ್ತಿ ಜತೆಗೆ ತಿಳಿವಳಿಕೆ ಹಾಗೂ ಜ್ಞಾನ ಮುಖ್ಯವಾಗಲಿದೆ. ದೇವಸ್ಥಾನದ ಇತಿಹಾಸ, ವಾಸ್ತುಶಿಲ್ಪ, ಉತ್ಸವಗಳು ಏಕೆ ನಡೆಯಲಿದೆ? ವಿಧಿವಿಧಾನಗಳು ಏನು ಹೇಳಲಿದೆ? ಎಂಬ ಮಾಹಿತಿಗಳು ಎಲ್ಲರಿಗೂ ನಿಖರವಾಗಿ ತಿಳಿದಿರುವುದಿಲ್ಲ. ಇಂತಹ ಪುಸ್ತಕಗಳಿಂದ ಉತ್ತಮವಾದ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೇಲಿಮಠ ಮಹಾಸಂಸ್ಥಾನದ ಶಿವಾನುಭವ ಚರಮೂರ್ತಿ ಶಿವರುದ್ರಮಹಾಸ್ವಾಮೀಜಿ, ಹಿರಿಯ ವಿದ್ವಾಂಸ ಟಿ.ವಿ. ವೆಂಕಟಾಚಲ ಶಾಸೀ ಹಾಗೂ ಅಭಿಜ್ಞಾನದ ಸೂರ್ಯಪ್ರಕಾಶ್ ಪಂಡಿತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net