

Mamata Banerjee: ಪ್ರಧಾನಿ ಮೋದಿಯವರ ಸ್ಥಾನಕ್ಕೆ ನಾನು ಗೌರವಿಸಿದಂತೆಯೇ ಅವರು ನನ್ನ ಸ್ಥಾನವನ್ನು ಗೌರವಿಸಬೇಕು. ಆದರೆ ಅವರು ಪಶ್ಚಿಮ ಬಂಗಾಳದ ಜನರನ್ನು ಕಳ್ಳರು ಎಂದು ಕರೆಯುತ್ತಾರೆ ಎಂದು ನಿರೀಕ್ಷಿರಲಿಲ್ಲ ಎಂದು ಮಂಗಳವಾರ (ಆಗಸ್ಟ್ 26) ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಆಗಸ್ಟ್ 22 ರಂದು ಕೋಲ್ಕತ್ತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಭ್ರಷ್ಟಾಚಾರ, ಅಪರಾಧ ಮತ್ತು ತೃಣಮೂಲ ಕಾಂಗ್ರೆಸ್ ಒಂದೇ ಆಗಿವೆ. ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಳುಹಿಸುವ ನಿಧಿ ಜನರಿಗೆ ತಲುಪುವುದಿಲ್ಲ. ಟಿಎಂಸಿ ಕಾರ್ಯಕರ್ತರು ದೋಚಿಕೊಳ್ಳುತ್ತಾರೆ ಎಂದು ಆರೋಪಿಸಿದ್ದರು.
ಈ ಕುರಿತು ಪೂರ್ವ ಬರ್ಧಮಾನ್ ಜಿಲ್ಲೆಯ ಬರ್ಧಮಾನ್ ಪಟ್ಟಣದಲ್ಲಿ ಸಾಮಾಜಿಕ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ರಾಜ್ಯದ ಜನರನ್ನು "ಕಳ್ಳರು" ಎಂದು ಕರೆದು ರಾಜ್ಯವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಂದ್ರ ರಾಜ್ಯಕ್ಕೆ ಕೊಡಬೇಕಾದ ಅನುದಾನವನ್ನು ತಡೆ ಹಿಡಿದಿದೆ ಎಂದು ಕಿಡಿಕಾರಿದರು.
ನಿಜವಾಗಿಯೂ ಭ್ರಷ್ಟಾಚಾರ ನಡೆಯುತ್ತಿರುವುದು ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಬಿಹಾರದ ಬಿಜೆಪಿ ಆಡಳಿತದ 'ಡಬಲ್-ಎಂಜಿನ್' ಸರ್ಕಾರಗಳಲ್ಲಿ, ಆದರೆ ಪ್ರಧಾನಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ವಾಗ್ದಾಲಿ ನಡೆಸಿದರು. ನಾವು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ, ಆದರೂ ನೀವು ರಾಜ್ಯಕ್ಕೆ ಬರಬೇಕಾದ ನಿಧಿಯನ್ನು ತಡೆಹಿಡಿದು ಪಶ್ಚಿಮ ಬಂಗಾಳವನ್ನು 'ಕಳ್ಳ' ಎಂದು ಕರೆಯುತ್ತೀರಿ. ನೀವು 186 ಕೇಂದ್ರ ತಂಡಗಳನ್ನು ಭ್ರಷ್ಟಾಚಾರ ಆರೋಪಗಳನ್ನು ತನಿಖೆ ಮಾಡಲು ಕಳುಹಿಸಿದ್ದೀರಿ. ಆದರೆ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗೆ ಶೂನ್ಯ ಅಂಕಗಳನ್ನು ಸ್ವೀಕರಿಸಲು ಸಾಧ್ಯವೇ? ಈ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಬ್ಯಾನರ್ಜಿಪ್ರತಿಪಾದಿಸಿದರು. (ಏಜೆನ್ಸೀಸ್)