

ಮಳವಳ್ಳಿ: ವ್ಯವಹಾರಿಕ ಬದುಕಿಗಾಗಿ ಎಲ್ಲ ಭಾಷೆಗಳನ್ನು ಕಲಿಯುವುದರ ಜತೆಗೆ ಕನ್ನಡವನ್ನು ಹೆತ್ತ ತಾಯಿಯಂತೆ ಗೌರವಿಸುವ ಮೂಲಕ ಅಭಿಮಾನ ಮೆರೆಯಬೇಕೆಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮುರುಳೀಧರ್ ತಿಳಿಸಿದರು.
ತಾಲೂಕಿನ ಉಪ್ಪನಹಳ್ಳಿ(ಕನ್ನಹಳ್ಳಿ) ಗ್ರಾಮದ ಮಹಾಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅನೇಕ ಭಾಷೆಗಳನ್ನು ಕೇಳಿ, ಕಲಿತು ಗೌರವಿಸೋಣ. ಅದೇ ರೀತಿ ನಮ್ಮ ನಾಡಿನಲ್ಲಿರುವ ಅನ್ಯ ಭಾಷಿಗ ಸ್ನೇಹಿತರಿಗೆ ನಾವು ಮಾತೃಭಾಷೆಯನ್ನು ಕಲಿಸುವ ಮೂಲಕ ಭಾಷಾ ಪ್ರೇಮವನ್ನು ದೇಶವ್ಯಾಪಿ ಹರಡುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಇಂಗ್ಲಿಷ್ ವ್ಯಾಮೋಹವಿದ್ದು, ಇಂಗ್ಲಿಷ್‌ನಲ್ಲಿ ಮಾತನಾಡಿದರಷ್ಟೇ ಗೌರವ ಎಂದುಕೊಂಡಿದ್ದಾರೆ. ಈ ತಪ್ಪು ಗ್ರಹಿಕೆಯನ್ನು ತೊರೆಯಬೇಕು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಆಧುನಿಕ ಜಗತ್ತಿಗೆ ನಮ್ಮ ನಾಡಿನ ನುಡಿಗಿರುವ ಪ್ರಾಮುಖ್ಯ ಮೌಲ್ಯವನ್ನು ಪರಿಚಯಿಸುವ ಸಾರಥಿಗಳಾಗಬೇಕೆಂದು ಕರೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಮಾತೃಭಾಷೆಯ ಬಗ್ಗೆ ನಾಡಿನ ಪ್ರತಿಯೊಬ್ಬರೂ ಸ್ವಾಭಿಮಾನದ ಸಂಕೇತವಾಗಿ ಕಾಣಬೇಕು. ಕನ್ನಡವನ್ನು ವಿದ್ಯಾರ್ಥಿ ದೆಸೆಯಲ್ಲೇ ಗೌರವಿಸುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕೆಂಬ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಡಿ.21 ರಿಂದ ಮಂಡ್ಯ ನಗರದಲ್ಲಿ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಡ ಹಬ್ಬದಂತೆ ಆಚರಿಸುವ ಮೂಲಕ ಸಂಭ್ರಮಿಸಬೇಕಿದ್ದು, ವಿದ್ಯಾರ್ಥಿಗಳು ಹಾಗೂ ತಾಲೂಕಿನ ಪ್ರತಿ ಗ್ರಾಮದಲ್ಲಿರುವ ಕುಟುಂಬದ ಸದಸ್ಯರೆಲ್ಲ್ಲ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡಾಭಿಮಾನದ ಕಿಚ್ಚನ್ನು ಎಲ್ಲರ ಮನದಲ್ಲಿ ಮೂಡಿಸುವಂತೆ ಮನವಿ ಮಾಡಿದರು.
ಜಾಗೃತಿ ಜಾಥಾ: ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳೊಡನೆ ಕನ್ನಡ ಜಾಗೃತಿ ಜಾಥಾ ನಡೆಸಲಾಯಿತು. ನಂತರ ಶಾಲೆಯಲ್ಲಿ ಕನ್ನಡದ ವಿಷಯವಾಗಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತ ಮಕ್ಕಳನ್ನು ಸನ್ಮಾನಿಸಲಾಯಿತು.
ಕಸಾಪ ಜಿಲ್ಲಾ ಉಪಾಧ್ಯಕ್ಷ ದೇವರಾಜು, ತಾಲೂಕು ಗೌರವ ಕಾರ್ಯದರ್ಶಿ ಚುಂಚಣ್ಣ, ಕಿರುಗಾವಲು ಹೋಬಳಿ ಅಧ್ಯಕ್ಷ ಗಟ್ಟಿಕೊಪ್ಪಲು ಸಿದ್ದರಾಜು, ಬಿ.ಜಿ.ಪುರ ಹೋಬಳಿ ಅಧ್ಯಕ್ಷ ಪಂಡಿತಹಳ್ಳಿ ಸುರೇಶ್, ಪದಾಧಿಕಾರಿಗಳಾದ ಶಿವರಾಜು, ಉಮೇಶ್, ನಾಗರಾಜು, ಗ್ರಾಮದ ಸೊಸೈಟಿ ಸಿಇಒ ನಂಜುಂಡಸ್ವಾಮಿ, ಮುಖಂಡ ಮಹದೇವಪ್ಪ, ಮುಖ್ಯಶಿಕ್ಷಕ ರಾಜೇಶ್ ಸೇರಿದಂತೆ ಸಹ ಶಿಕ್ಷಕರು ಉಪಸ್ಥಿತರಿದ್ದರು.