

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಶಿಕ್ಷಣದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗುಜರಾತ್ ವಿಶ್ವವಿದ್ಯಾಲಯವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಿಚಾರಣೆಗೆ ತಡೆ ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ್ರು. ಅರ್ಜಿ ವಿಚಾರಣೆ ನಡೆಸಿ ಸಂಜೀವ್ ಖನ್ನಾ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ವಿಚಾರಣೆಯೂ ಗುಜರಾತ್ ಹೈಕೋರ್ಟಿನಲ್ಲಿ ಬಾಕಿ ಇರುವ ಕಾರಣ ತಡೆ ನೀಡಲು ಸಾಧ್ಯವಿಲ್ಲ. ಆಗಸ್ಟ್ 29ರಂದು ಗುಜರಾತ್ ಹೈಕೋರ್ಟ್ ವಿಚಾರಣೆ ನಡೆಸಲಿದ್ದು, ಆ ನಂತರ ತೀರ್ಮಾನಿಸಲಾಗುವುದು ಎಂದು ಹೇಳುತ್ತ ಅರ್ಜಿಯನ್ನು ನಿರಾಕರಿಸಿದೆ.
ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಗುಜರಾತ್ ವಿಶ್ವವಿದ್ಯಾಲಯವು ನಿಜವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪದವಿ ನೀಡಿದ್ದರೆ ಮಾಹಿತಿ ಹಕ್ಕು ಕಾಯ್ದೆಯಡಿ ಯಾಕೆ ಉತ್ತರವನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದರು.
ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಶಿಕ್ಷಣ ನಕಲಿ ವಿಶ್ವವಿದ್ಯಾಲಯ ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಯಾವುದಾದರು ವಿಶ್ವವಿದ್ಯಾಲಯಗಳಲ್ಲಿ ಪ್ರಧಾನಿ ವ್ಯಾಸಂಗ ಮಾಡಿದ್ದಲ್ಲಿ, ನಮ್ಮಲ್ಲಿ ವ್ಯಾಸಂಗ ಮಾಡಿದವರು ಇಂದು ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿಕೊಂಡು ಸಂಭ್ರಮಿಸುತ್ತಿದ್ದರು ಎಂದು ವ್ಯಂಗ್ಯಭರಿತವಾಗಿ ಮಾತನಾಡಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಪಕ್ಷದ ನಾಯಕ ಸಂಜಯ್ ಸಿಂಗ್ ಅವರ ಹೇಳಿಕೆಗಳು ಗುಜರಾತ್ ವಿಶ್ವವಿದ್ಯಾಲಯದ ಹೆಸರನ್ನು ಕೆಡಿಸುತ್ತಿದ್ದು, ಮಾನನಷ್ಟಕ್ಕೂ ಕಾರಣವಾಗಿದೆ ಎಂದು ಆರೋಪಿಸಿ ವಿವಿಯ ರಿಜಿಸ್ಟಾರ್ ಪಿಯೂಷ್ ಪಟೇಲ್ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.