ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು!

cm
Published on

ನವದೆಹಲಿ: ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ರೋಸ್​ ಅವೆನ್ಯೂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ನಿನ್ನೆ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಇಂದಿಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶರಾದ ನಿಯಯ್ ಬಿಂದು 2 ದಿನಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ, ಇಂದು ಈ ಪ್ರಕರಣದ ಆದೇಶ ಪ್ರಕಟಿಸಿದೆ. ಎಎಪಿ ಮುಖ್ಯಸ್ಥರು 1 ಲಕ್ಷ ರೂಪಾಯಿ ಜಾಮೀನು ಬಾಂಡ್ ಪಾವತಿಸಿದ ನಂತರ ಶುಕ್ರವಾರ ತಿಹಾರ್ ಜೈಲಿನಿಂದ ಹೊರಬರಲಿದ್ದಾರೆ.

ಏನಿದು ಪ್ರಕರಣ?: ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಕೇಜ್ರಿವಾಲ್​ ಅವರಿಗೆ ಇ.ಡಿ. 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್​ 21ರಂದು ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅವರು ಮಧ್ಯಂತರ ಜಾಮೀನು ಪಡೆದು ಒಂದು ತಿಂಗಳು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಜೈಲಿಗೆ ಮರಳುವಂತೆ ಕೋರ್ಟ್‌ ಈ ಹಿಂದೆಯೇ ಆದೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net