

ಬೆಂಗಳೂರು: ಅಯೋಧ್ಯೆಯಲ್ಲಿ ಭಗವಾನ್ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿರುವ ರಾಮಲಲ್ಲಾನ ವಿಗ್ರಹ ಕೆತ್ತನೆಯ ಶಿಲ್ಪಿ ಅರುಣ್ ಯೋಗಿರಾಜ್. ಈ ಕಣ್ಣುಗಳಿಗೆ ಜೀವ ತುಂಬಿದ್ದ ಚಿನ್ನದ ಉಳಿ ಹಾಗೂ ಬೆಳ್ಳಿ ಸುತ್ತಿಗೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅರುಣ್ ಯೋಗಿರಾಜ್ ಅವರು ಎಕ್ಸ್‌ನಲ್ಲಿ, “ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿಯನ್ನು ಹಂಚಿಕೊಳ್ಳಲು ನಾನು ಯೋಚಿಸಿದೆ. ಇದರಲ್ಲಿ ನಾನು ರಾಮ ಲಲ್ಲಾನ (Ram lalla) ದೈವಿಕ ಕಣ್ಣುಗಳನ್ನು (ನೇತ್ರೋನ್ಮಿಲನ) ಕೆತ್ತಿದ್ದೇನೆ” ಎಂದು ಬರೆದಿದ್ದಾರೆ.
ಖಾಸಗಿವಾಹಿನಿ ಜತೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು, ರಾಮನ ಕಣ್ಣಗಳನ್ನು ಗರ್ಭಗುಡಿ ಹೊರಗಡೆ ಕೆತ್ತಲಾಗಿದೆ. ಅದಕ್ಕಂತಲೇ ನೇತ್ರಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತ ಫಿಕ್ಸ್ ಮಾಡಿದ್ದರು. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಕ್ಲೋಸ್ ಮಾಡಿದೆವು. ನಂತರ ಅವರು ಜೇನುತಪ್ಪ, ಹಳದಿ ಎಲ್ಲಾ ಹಾಕಿ ಕಣ್ಮುಚ್ಚಿ ಬಿಡುತ್ತಿದ್ದರು. ಈ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಲ್ಲಿ ಮಾಡಿರುತ್ತೇನೆ. ರಾಮನ ಕಣ್ಣುಗಳನ್ನು ಕೆತ್ತನೆ ಮಾಡುವಾಗ ತುಂಬಾ ಭಯ ಆಗಿತ್ತು. ಈ ಸಮಯದಲ್ಲಿ ನಾನು ನನ್ನ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಅವರ ಬಳಿ ನಾನು ಹೆಂಗೆ ಮಾಡಿದ್ದೇನೆ ಅಪ್ಪ ಅಂತಾ ಕೇಳಬೇಕಿತ್ತು. ಆದರೆ ಅಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಇದ್ದೆ. ಭಯ ತಡೆದುಕೊಳ್ಳಲು ಆಗದೆ ಕೊನೆಗೆ ನನ್ನ ಸಹಪಾಠಿಗಳ ಜತೆ ಕಣ್ಣಿನ ಬಗ್ಗೆ ಹೇಳಿಕೊಂಡೆ ಎಂದು ಹೇಳಿದ್ದಾರೆ.
ನಮ್ಮ ಕುಟುಂಬ ಸಾಕಷ್ಟು ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬರುತ್ತಿದೆ. ಇಂದು ಅಷ್ಟು ದೊಡ್ಡ ದೇವಸ್ಥಾನಕ್ಕೆ ನಾನೇ ವಿಗ್ರಹ ಮಾಡಿಕೊಟ್ಟೆ ಎಂಬುದನ್ನು ನನಗೆ ನಂಬೋಕೆ ಆಗ್ತಿಲ್ಲ. ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನನಗೆ ಮಗುವನ್ನು ಅರಮನೆಗೆ ತಂದಂತೆ ಭಾಸವಾಗ್ತಿತ್ತು ಎಂದು ಹೇಳುತ್ತಾ ಸಂತೋಷ ವ್ಯಕ್ತಪಡಿಸಿದ್ದಾರೆ.