

ರಾಣೆಬೆನ್ನೂರ: ಪ್ರಧಾನಿ ನರೇಂದ್ರ ಮೋದಿಜಿಯವರ ಸಾಮಾಜಿಕ ಕಳಕಳಿಯ ಮನ್ ಕಿ ಬಾತ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು, 125ನೇ ಮನ್ ಕಿ ಬಾತ್ ವೀಕ್ಷಿಸುವುದರಲ್ಲಿ ದೇಶದಲ್ಲಿ 94 ಮತ್ತು ರಾಜ್ಯದಲ್ಲಿ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರವು 10ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಭಾಷಣವನ್ನು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಆಲಿಸುವ ಮಾಲಕ ರಾಜ್ಯಕ್ಕೆ ಈ ಸಾಧನೆ ನೀಡಿದ್ದಾರೆ.
ಈ ಕುರಿತು ರಾಜ್ಯ ಮತ್ತು ರಾಷ್ಟ್ರದ ಬಿಜೆಪಿ ವತಿಯಿಂದ ಅಧಿಕೃತವಾಗಿ ಪ್ರಶಂಸೆಯ ಪತ್ರ ತಮಗೆ ಕಳಿಸಿದ್ದು ಸಂತಸ ಮೂಡಿಸಿದೆ. ಮುಂದಿನ ಮನ್ ಕಿ ಬಾತ್ ನಲ್ಲಿ ಈ ಕ್ಷೇತ್ರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಕಾರ್ಯಕರ್ತರು ಮುಂದಾಗಬೇಕು ಎಂದರು.
ಕೋಟ್ಯಾಂತರ ಭಕ್ತರ ಆರಾಧ್ಯ ದೇವರಾಗಿರುವ ಧರ್ಮಸ್ಥಳದ ಬಗೆಗೆ ನಡೆಯುತ್ತಿರುವ ಅಪಪ್ರಚಾರ ತಡೆಯಲು ಹಾಗೂ ಭಾವನೆಗೆ ಧಕ್ಕೆ ತಂದಿರುವ ಅಪಪ್ರಚಾರಿಗಳ ಕುರಿತು ಬಿಜೆಪಿ ಹಮ್ಮಿಕೊಂಡಿರುವ ಧರ್ಮಸ್ಥಳ ಜಾಥಾಕ್ಕೆ ರಾಣೆಬೆನ್ನೂರನಿಂದ 350ಕ್ಕೂ ಅಧಿಕ ಕಾರ್ಯಕರ್ತರು ತೆರಳಲಿದ್ದಾರೆ ಎಂದರು.
ಸುಕ್ಷೇತ್ರ ಧರ್ಮಸ್ಥಳದ ಬಗೆಗೆ ಬುರುಡೆ ಗ್ಯಾಂಗ್ನವರು ಮಾಡಿರುವ ಅನೈತಿಕ, ಅನ್ಯಾಯದ ಪ್ರಹಸನಕ್ಕೆ ಸರ್ಕಾರವು ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಬಿಜೆಪಿಯು ಈ ಕಾರ್ಯಕ್ರಮವನ್ನು ಲಕ್ಷಾಂತರ ಕಾರ್ಯಕರ್ತರೊಂದಿಗೆ ಧರ್ಮಸ್ಥಳ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಮುಖರಾದ ಭಾರತಿ ಜಂಬಗಿ, ನಿಂಗರಾಜ ಕೋಡಿಹಳ್ಳಿ, ಚೋಳಪ್ಪ ಕಸವಾಳ, ಸಿದ್ದಣ್ಣ ಚಿಕ್ಕಬಿದರಿ, ಶಿವುಕುಮಾರ ನರಸಗೊಂಡರ, ಮಂಜುನಾಥ ಓಲೇಕಾರ, ಪ್ರಕಾಶ ಪೂಜಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.