ಮಕ್ಕಳ ರಕ್ಷಣೆಗೆ ಕಠಿಣ ಕಾನೂನು: ಇನ್ನೂ ನಿಲ್ಲದ ದೌರ್ಜನ್ಯ, ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ನಿರ್ಲಕ್ಷ್ಯ

Childrens rights day
Published on

| ಪಂಕಜ ಕೆ.ಎಂ. ಬೆಂಗಳೂರು

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಹಲವು ಕಾನೂನು ಜಾರಿಗೆ ತಂದಿದೆ. ಸಂವಿಧಾನ ಮಕ್ಕಳಿಗೆ ಇಷ್ಟೆಲ್ಲಾ ಹಕ್ಕುಗಳನ್ನು ನೀಡಿದ್ದರೂ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇಂದಿಗೂ ಶಿಕ್ಷಣದಿಂದ ವಂಚಿತರಾದ ಮಕ್ಕಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಬಾಲ ಕಾರ್ವಿುಕರು, ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸುವುದು ಪತ್ತೆ ಆಗುತ್ತಲೇ ಇವೆ. ಇನ್ನು ಹೆಣ್ಣು ಮಕ್ಕಳಲ್ಲಿ ಬಾಲ್ಯವಿವಾಹ ಅವ್ಯಾಹತವಾಗಿ ಸಾಗಿದೆ. ಮಕ್ಕಳ ಮೇಲಿನ ಲೈಂಗಿಕ ಕಿರುಕುಳಗಳು ಸಹ ದಿನದಿಂದ ದಿನಕ್ಕೆ ಹೆಚ್ಚು ವರದಿಯಾಗುತ್ತಲೇ ಇವೆ.

ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡುವಾಗ 1992ರಲ್ಲಿ ಪರಿಚ್ಛೇದ 32ಕ್ಕೆ ಭಾರತ ಅವಕಾಶ ಕೋರಿತ್ತು. ಅಂದರೆ 5 ವರ್ಷಗಳಲ್ಲಿ ಮಕ್ಕಳನ್ನು ಆರ್ಥಿಕ ಶೋಷಣೆಯಿಂದ ತಪ್ಪಿಸುವುದು ಎಂದು. ಆದರೆ ಅದು ಇನ್ನೂ ನಿಂತಿಲ್ಲ. ಇದರಿಂದಾಗಿ ದೇಶದಲ್ಲಿ ಎಷ್ಟೇ ಬಾಲ ಕಾರ್ವಿುಕ ಪದ್ಧತಿ ಕಾನೂನು ಜಾರಿಗೆ ತಂದರೂ ಅವು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದಲ್ಲದೆ 2011ರಲ್ಲಿ ಮಕ್ಕಳ ಹಕ್ಕುಗಳ ಕುರಿತಾದ ಐಚ್ಛಿಕ ಕಾರ್ಯಸೂಚಿಯಲ್ಲಿ ಮಕ್ಕಳು ಮತ್ತು ಸಂವಹನ ವಿಷಯಕ್ಕೆ (ದೇಶದಲ್ಲಿ ಮಕ್ಕಳಿಗೆ ನ್ಯಾಯ ಸಿಗದಿದ್ದರೆ ಆ ಮಕ್ಕಳು ನೇರವಾಗಿ ವಿಶ್ವ ಸಂಸ್ಥೆಗೆ ದೂರು ಸಲ್ಲಿಸಬಹುದು) ಸಂಬಂಧಿಸಿದಂತೆ ಭಾರತ ಸರ್ಕಾರ ಇನ್ನೂ ಸಹಿ ಮಾಡಿಲ್ಲ. ಬದಲಿಗೆ ಭಾರತದಲ್ಲಿ ಮಕ್ಕಳ ರಕ್ಷಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಮರ್ಥಿಸಿಕೊಂಡಿದೆ.

ಬಾಲ್ಯವಿವಾಹ ನಿಷೇಧ ಕಾಯ್ದೆ: 2006ರಲ್ಲಿ ರೂಪುಗೊಂಡ ಬಾಲ್ಯವಿವಾಹ ನಿಷೇಧ ಕಾಯ್ದೆ, 2007ರ ನ.1 ರಿಂದ ಜಾರಿಗೆ ಬಂದಿತು. ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ 21 ವರ್ಷ ಮೇಲ್ಪಟ್ಟ ಪುರುಷರು ಮತ್ತು 18 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ವಿವಾಹ ಮಾಡಿಕೊಳ್ಳಬಹುದು ಎಂದು ಘೋಷಿಸಿತು.

ಬಾಲಕಾರ್ವಿುಕ ಪದ್ಧತಿ ನಿಷೇಧ ಕಾನೂನು: 1986ರ ಬಾಲಕಾರ್ವಿುಕ ಕಾನೂನು ಮಕ್ಕಳನ್ನು ಆರ್ಥಿಕ ಉದ್ದೇಶಗಳಿಗಾಗಿ ದುಡಿಸಿಕೊಳ್ಳದಿರುವುದು, ಅಪಾಯಕಾರಿ ಕೆಲಸಗಳಿಂದ ದೂರವಿರಿಸಲು ನೆರವಾಗುತ್ತದೆ.

ಭಾರತ ಸಂವಿಧಾನದಲ್ಲಿ ಮಕ್ಕಳ ಹಕ್ಕುಗಳು: ಸಂವಿಧಾನದ ಪರಿಚ್ಛೇದ 21(ಎ)ರಲ್ಲಿ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ಕಲ್ಪಿಸಬೇಕು. ಪರಿಚ್ಛೇದ 23ರಲ್ಲಿ ಅಕ್ರಮವಾಗಿ ಸಾಗಣೆ ಮಾಡುವವರಿಂದ ಮಕ್ಕಳನ್ನು ರಕ್ಷಣೆ ಮಾಡಬೇಕು. ಪರಿಚ್ಛೇದ 24ರಲ್ಲಿ ಯಾವುದೇ ಅಪಾಯಕಾರಿ ಉದ್ದಿಮೆ ಅಥವಾ ಕಾರ್ಖಾನೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಬಲವಂತದ ದುಡಿಮೆಯಿಂದ ರಕ್ಷಿಸುವುದು. ಪರಿಚ್ಛೇದ 39 (ಇ)ರಲ್ಲಿ ಆರ್ಥಿಕವಾಗಿ ಲಾಭಗಳಿಸುವ ಉದ್ದೇಶದಿಂದ ಮಕ್ಕಳನ್ನು ವಯಸ್ಸು ಮತ್ತು ಶಕ್ತಿಗೆ ಮೀರಿ ದುಡಿಮೆಗೆ ದೂಡುವವರಿಂದ ರಕ್ಷಣೆ ಮಾಡುವುದು. ಪರಿಚ್ಛೇದ 39(ಎಫ್)ರಲ್ಲಿ ದರೋಡೆ ಮತ್ತು ದೌರ್ಜನ್ಯಗಳಿಂದ ರಕ್ಷಿಸಿಕೊಳ್ಳಲು ಮತ್ತು ಅಭಿವೃದ್ಧಿಗೆ ನೆರವಾಗುವ ಎಲ್ಲ ಬಗೆಯ ಅವಕಾಶಗಳನ್ನು ಪಡೆಯುವ ಹಕ್ಕು ಒದಗಿಸುವುದು. ಪರಿಚ್ಛೇದ 45ರಲ್ಲಿ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಜೊತೆಗೆ ಸುರಕ್ಷತೆ ಒದಗಿಸುವ ಹಕ್ಕುಗಳಾಗಿವೆ.

ಶಿಕ್ಷಣ ಹಕ್ಕು: 2002ರಲ್ಲಿ ಸಂವಿಧಾನದ 68ನೇ ತಿದ್ದುಪಡಿಯಲ್ಲಿ ಎಲ್ಲ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ಒಂದಾಗಿ ಸೇರಿಸಲಾಯಿತು. ಈ ಮೂಲಕ ಸರ್ಕಾರಿ ಶಾಲೆಗಳಷ್ಟೇ ಅಲ್ಲದೆ, ಖಾಸಗಿ ಶಾಲೆಗಳಲ್ಲೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೇ. 25 ಸೀಟುಗಳನ್ನು ಮೀಸಲಿರಿಸುವ ಕಾನೂನು ರೂಪಿಸಲಾಯಿತು.

ಲೈಂಗಿಕ ಕಿರುಕುಳದಿಂದ ರಕ್ಷಣೆ: 2012ರಲ್ಲಿ ರೂಪಿಸಲಾದ ಈ ಕಾನೂನಿನ ಅನ್ವಯ ಮಕ್ಕಳಿಗೆ ಲೈಂಗಿಕ ಹಿಂಸೆ ನೀಡುವುದು, ಮಕ್ಕಳ ಮುಂದೆ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸುವುದು, ಅಶ್ಲೀಲ ಚಿತ್ರಗಳಲ್ಲಿ ಮಕ್ಕಳ ನಟನೆಯನ್ನು ಈ ಕಾನೂನು ನಿಷೇಧಿಸುತ್ತದೆ.

ಪರಿಚ್ಛೇದ 42ರಲ್ಲಿ ಹೇಳಿರುವಂತೆ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿರುವ ದೇಶಗಳು ಅವುಗಳ ಕುರಿತು ವ್ಯಾಪಕ ಪ್ರಚಾರ ನೀಡಬೇಕು. ಆದರೆ ಈ ಕಾರ್ಯದಲ್ಲಿ ಈವರೆಗಿನ ಎಲ್ಲ ಸರ್ಕಾರಗಳು ವಿಫಲವಾಗಿವೆ. ಕಾರಣ ಮಕ್ಕಳು ಮತದಾರರಲ್ಲ ಎಂಬ ಮನೋಭಾವನೆ. ಹೀಗಾಗಿ ಸರ್ಕಾರ ಮಾತ್ರವಲ್ಲ ಸಾರ್ವಜನಿಕರಿಗೂ ಮಕ್ಕಳ ಹಕ್ಕುಗಳ ಬಗ್ಗೆ ಅರಿವಿಲ್ಲವಾಗಿದೆ. | ನಾಗಸಿಂಹ ಜಿ. ರಾವ್ ನಿರ್ದೇಶಕ, ಚೈಲ್ಡ್ ರೈಟ್ಸ್ ಟ್ರಸ್ಟ್

ಮಕ್ಕಳ ಹಕ್ಕುಗಳ ದಿನಾಚರಣೆ ಏಕೆ?

‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಹಾಗಾಗಿ ಮಕ್ಕಳ ಯೋಗಕ್ಷೇಮ, ಆರೋಗ್ಯ, ಶಿಕ್ಷಣ ಸೇರಿ ಉತ್ತಮ ಹಾಗೂ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಪೂರಕ ಅವಕಾಶಗಳನ್ನು ಒದಗಿಸಿಕೊಡುವುದಕ್ಕಾಗಿ ಪ್ರತಿ ವರ್ಷ ನ. 20ರಂದು ‘ವಿಶ್ವ ಮಕ್ಕಳ ಹಕ್ಕುಗಳ ದಿನ’ ಆಚರಿಸಲಾಗುತ್ತದೆ. 1959ರಲ್ಲಿ ವಿಶ್ವ ಸಂಸ್ಥೆಯಲ್ಲಿ ನ. 20ರಂದು ಮಕ್ಕಳ ಹಕ್ಕುಗಳನ್ನು ಘೋಷಿಸಲಾಯಿತು. 1989ರಲ್ಲಿ ಇದೇ ದಿನ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತವೂ ಸೇರಿ 190 ರಾಷ್ಟ್ರಗಳು ಸಹಿ ಹಾಕಿದವು. ಈ ಎರಡು ಮಹತ್ತರ ಘಟನೆಗಳ ನೆನಪಿಗಾಗಿ 1990ರಿಂದ ವಿಶ್ವದಾದ್ಯಂತ ನ. 20ರಂದು ಮಕ್ಕಳ ಹಕ್ಕುಗಳ ದಿನ ಆಚರಣೆಯ ನಿರ್ಧಾರ ಕೈಗೊಳ್ಳಲಾಯಿತು. ಅಂತೆಯೇ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಲ್ಲರೂ ಮಕ್ಕಳು. ಇವರ ಹಕ್ಕುಗಳ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಆ ಮೂಲಕ ಮಕ್ಕಳಿಗೆ ಅವರ ಹಕ್ಕುಗಳನ್ನು ಕಲ್ಪಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net