ದಾಸೋಹತತ್ತ್ವದ ಮೇರುಶಿಖರ ಶಿವಕುಮಾರ ಸ್ವಾಮೀಜಿ

Shivakumara Swamiji
Published on
ಹಸಿವಿನಿಂದ ಬಂದವರಿಗೆ ಅನ್ನದಾಸೋಹಿಯಾಗಿ, ಜ್ಞಾನವನ್ನು ಅರಸಿಬಂದವರಿಗೆ ಅರಿವಿನ ದಾಸೋಹಿಯಾಗಿ, ಅನಾಥರಾಗಿ ಬಂದವರಿಗೆ ಆಶ್ರಯದಾಸೋಹಿಯಾಗಿ, ರಕ್ಷಣೆ ಕೋರಿ ಬಂದವರಿಗೆ ಅಭಯದಾಸೋಹಿಯಾಗಿ ಲಕ್ಷೋಪಲಕ್ಷ ಜನರನ್ನು ಪೋಷಿಸಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿದವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು. ಅವರ ನಾಲ್ಕನೆಯ ಪುಣ್ಯ ಸಂಸ್ಮರಣೋತ್ಸವದ ಸಂದರ್ಭದಲ್ಲಿ ಭಕ್ತಿಪೂರ್ವಕ ಸ್ಮರಣಾಂಜಲಿ.
| ಬಾಲಚಂದ್ರ ಎಂ.

ವಂದೇಶಿವಕುಮಾರಾಯ ದಾಸೋಹ ಗುಣಮೂರ್ತಯೇ |

ಕಾಯಕಾಢ್ಯನಮಸ್ತುಭ್ಯಂ ಲಿಂಗಜಂಗಮರೂಪಿಣೇ ||

1942ನೇ ಇಸವಿಯ ಮಾರ್ಚ್ ತಿಂಗಳು! ಆ ವರ್ಷ ಸ್ವಲ್ಪಮಟ್ಟಿಗೆ ಬರಗಾಲದ ವರ್ಷವೂ ಹೌದು. ಒಂದು ದಿನ ಸಂಜೆ ಶ್ರೀ ಸಿದ್ಧಗಂಗಾ ಮಹಾದಾಸೋಹದ ಮೇಲ್ವಿಚಾರಕರು ಅಂದಿನ ಸ್ವಾಮಿಗಳ ಹತ್ತಿರ ಬಂದು, ‘ಸ್ವಾಮಿ, ದಾಸೋಹ ಮಾಡಲು ದವಸ ಧಾನ್ಯಗಳು ಖಾಲಿಯಾಗಿವೆ’ ಎಂದು ಹೇಳುತ್ತಾರೆ. ಆಗ ಸ್ವಾಮಿಗಳು, ಮುಂದೇನು?! ಎಂದು ಚಿಂತಾಮಗ್ನರಾಗುತ್ತಾರೆ. ಆಗ ಸ್ವಾಮಿಗಳ ಪಕ್ಕದಲ್ಲಿದ್ದ ಒಬ್ಬ ಭಕ್ತ ತನ್ನ ಊರಿನ ಶಾನುಭೋಗರ ಮನೆಯಲ್ಲಿ ಅಪಾರವಾದ ದವಸಧಾನ್ಯ ಇದ್ದು, ತನಗೆ ಅವರ ಪರಿಚಯವಿದೆ ಎಂದು ತಿಳಿಸುತ್ತಾನೆ. ಸ್ವಾಮಿಗಳು ಸಮಯ ವ್ಯರ್ಥ ಮಾಡದೆ ಶ್ರೀ ಶಾಂತಮುನಿ ಮಹಾಸ್ವಾಮಿಗಳು ಆ ವ್ಯಕ್ತಿಯನ್ನು ತಮ್ಮೊಡನೆ ಕರೆದುಕೊಂಡು ಸಿದ್ಧಗಂಗಾ ಕ್ಷೇತ್ರದಿಂದ 39 ಮೈಲಿ ದೂರದ ಆ ಊರಿಗೆ ಬರಿಗಾಲಲ್ಲೇ ನಡೆದು ಹೋಗುತ್ತಾರೆ. ಸ್ವಾಮಿಗಳು ಶಾನುಭೋಗರ ಮನೆಯ ಮುಂದೆ ನಿಂತು, ‘ಭವತೀ ಭಿಕ್ಷಾಂದೇಹಿ! ಮಠದಲ್ಲಿ ಮಕ್ಕಳು ಹಸಿದಿದ್ದಾರೆ! ಜೊತೆಗೆ ಅಕ್ಕಪಕ್ಕದ ಊರುಗಳ ಜನ ಬರಗಾಲದಿಂದ ಕಂಗೆಟ್ಟು ಶ್ರೀಮಠವನ್ನು ಆಶ್ರಯಿಸಿದ್ದಾರೆ. ಹಸಿದಿರುವ ಅವರ ಹೊಟ್ಟೆಗಳನ್ನು ತುಂಬಿಸಲು ಭಿಕ್ಷೆ ಬಯಸಿ ಬಂದಿದ್ದೇನೆ’ ಎಂದು ಜಂಗಮ ಜೋಳಿಗೆಯನ್ನು ಚಾಚುತ್ತಾರೆ. ಸರ್ವಸಂಗ ಪರಿತ್ಯಾಗಿಯಾಗಿರುವ ಸಂತ 39 ಮೈಲಿ ದೂರದ ಸಿದ್ಧಗಂಗಾ ಕ್ಷೇತ್ರದಿಂದ ಬರಿಗಾಲಲ್ಲಿ ನಡೆದುಬಂದು, ಹಸಿದ ಹೊಟ್ಟೆಗಳನ್ನು ತುಂಬಿಸಲು ಭಿಕ್ಷೆ ಕೇಳುತ್ತಿರುವುದನ್ನು ಕಂಡು ತನ್ನ ಮನೆಯಲ್ಲಿದ್ದ ಎಲ್ಲಾ ದವಸ ಧಾನ್ಯಗಳನ್ನು ಶಾನುಭೋಗ ಅರ್ಪಿಸುತ್ತಾನೆ. ತಾವು ಭಿಕ್ಷೆ ಪಡೆದು ತಂದ ಆ ದವಸ ಧಾನ್ಯಗಳನ್ನು ದಾಸೋಹದ ರೂಪದಲ್ಲಿ ಅಹಂ ದಾಸಃ = ನಾನು ನಿಮ್ಮ ಸೇವಕ ಎಂಬ ದಾಸೋಹ ಭಾವದಿಂದ, ಹಸಿದ ಲಕ್ಷಾಂತರ ಹೊಟ್ಟೆಗಳನ್ನು ತಣಿಸಿ ಸಮಾಜದಿಂದ ಪಡೆದದ್ದನ್ನು ಮರಳಿ ಸಮಾಜಕ್ಕೇ ಅರ್ಪಿಸುತ್ತಾರೆ. ಕಾಯಕಕ್ಕೆ ಗೌರವ ಕೊಟ್ಟು, ದಾಸೋಹಕ್ಕೆ ಮೊದಲ ಆದ್ಯತೆ ನೀಡಿ, ಹಸಿವಿಗೆ ಮುಕಿ ್ತುನ್ನು ಕೊಟ್ಟು, ವಿದ್ಯೆಗೆ ಶಕ್ತಿಯನ್ನು ತುಂಬಿ ಸನಾತನ ಭಾರತೀಯ ಸಂಸ್ಕೃತಿಗೆ ಪರಮಶ್ರೇಷ್ಠವಾದ ಗೌರವವನ್ನು ನೀಡಿದಂತಹ ಈ ಮಹಾಜಂಗಮರೇ, ನಡೆದಾಡಿದ ದೈವ, ಕರ್ನಾಟಕ ರತ್ನ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರು.

12ನೆಯ ಶತಮಾನದ ಬಸವಾದಿ ಶಿವಶರಣರ ಭವ್ಯ ದಾಸೋಹ ಪರಂಪರೆಯನ್ನು 20 ಹಾಗೂ 21ನೆಯ ಶತಮಾನದಲ್ಲಿ ಸಿದ್ಧಗಂಗೆಯಲ್ಲಿ ಮತ್ತೆ ಗತವೈಭವಕ್ಕೆ ಕೊಂಡೊಯ್ದು ಜಗತ್ತಿನ ಜನರಿಗೆ ದಾಸೋಹದ ಮಹತ್ವವನ್ನು ಹಾಗೂ ದಾಸೋಹದ ಹಿರಿಮೆ ಗರಿಮೆಯ ವಿಶ್ವರೂಪದರ್ಶನ ಮಾಡಿಸಿದವರು ಮಹಾದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರು. ‘ದಾಸೋಹವೆಂಬ ಸೋಹೆಗೊಂಡು ಹೋಗಿ, ಗುರುವಕಂಡೆ, ಲಿಂಗವಕಂಡೆ, ಜಂಗಮವ ಕಂಡೆ, ಪ್ರಸಾದವ ಕಂಡೆ, ಇಂತೀ ಚತುರ್ವಿಧ ಸಂಪನ್ನನಾದೆ ಕಾಣಾ ಕೂಡಲಸಂಗಮದೇವಾ’ ಎಂಬ ಮಹಾದಾಸೋಹಿ ಬಸವೇಶ್ವರರ ವಚನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ಮಹಾದಾಸೋಹಮೂರ್ತಿ ಅವರು.

ಕಾಯಕ ಮತ್ತು ದಾಸೋಹಗಳು ಮನುಷ್ಯನ ದೇಹ ಮತ್ತು ಮನಸ್ಸುಗಳನ್ನು ಪರಿಶುದ್ಧ ಮಾಡುವ ಹಾಗೂ ಪವಿತ್ರವನ್ನಾಗಿಸುವ ಭೂಲೋಕದ ಶುದ್ಧ ಸಂಜೀವಿನಿಗಳು ಎಂದು ಪೂಜ್ಯರು ಸಾರಿದರು. ‘ಸೋಹಂ ಎಂಬುದು ಅಂತರಂಗದ ಮದ, ಶಿವೋಹಂ ಎಂಬುದು ಬಹಿರಂಗದ ಮದ, ಈ ದ್ವಂದ್ವವನಳಿಸಿ ದಾಸೋಹಂ ಎಂದೆನಿಸಯ್ಯ’ ಎಂಬ ಶಿವಯೋಗಿ ಸಿದ್ಧರಾಮರ ಮಾತಿನ ಮಹತ್ವವನ್ನು ಹಾಗೂ ‘ಜನ್ಮ ಜನ್ಮಕ್ಕೆ ಹೋಗಲೀಯದೆ, ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ಎಂಬ ಅಣ್ಣ ಬಸವಣ್ಣನವರ ಮಾತಿನ ಶ್ರೇಷ ್ಠೆಯನ್ನು ತಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಸಿಕೊಂಡು ಸೇವಾಭೂಮಿಯಾದ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತಂದರು.

‘ದಾನ ಮಾಡಿ ಸೊರಗಬಾರದು, ಅನ್ನ ಹಾಕಿ ಹಂಗಿಸಬಾರದು, ಅನ್ನ ನನ್ನದೆಂದು ಅಹಂಕಾರ ಪಡಬಾರದು, ಅನ್ನಕ್ಕಿಂತ ದೊಡ್ಡ ದೈವವಿಲ್ಲ, ದಾಸೋಹಕ್ಕಿಂತ ಹೆಚ್ಚಿನ ಪುಣ್ಯವಿಲ್ಲ. ನಾವು ನೀಡುವ ಒಂದೊಂದು ತುತ್ತು ಅನ್ನವೂ ಅವರವರಿಗೆ ಸೇರಿದ್ದು ಎಂದು ಭಾವಿಸಬೇಕು’ ಎಂಬ ಈ ಶ್ರೀವಾಣಿಯೇ ಅವರ ದಾಸೋಹ ಕಾಳಜಿಗೆ ಸಾಕ್ಷಿ. ಅವರಿಗೆ ದಾಸೋಹವೇ ಜೀವಾಳವಾಗಿತ್ತು. ಸಿದ್ಧಗಂಗಾ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರೂ ಹೊಟ್ಟೆತುಂಬಾ ಊಟ ಮಾಡಿಕೊಂಡು ಹೋಗಬೇಕೆಂಬುದೇ ಪೂಜ್ಯರ ಆಸೆಯಾಗಿತ್ತು. ಜೀವನದ ಕೊನೆಯುಸಿರು ಇರುವವರೆಗೂ ದಾಸಃ ಅಹಂ = ದಾಸೋಹಂ ಅಂದರೆ ಜನಸೇವೆಯನ್ನು ಮಾಡುವ ಸೇವಕನು ನಾನು ಎಂಬ ಅರ್ಥದಲ್ಲಿ ದಾಸೋಹ ಪದಕ್ಕೆ ನೈಜವಾದ ಅರ್ಥಕೊಟ್ಟು, ಉಣಿಸಿ-ಉಣ್ಣುವ ಭಾವವೇ ದಾಸೋಹದ ತಿರುಳು ಎಂದು ಜಗತಿ ್ತೆ ಸಾರಿದರು.

ಸ್ವಾಮೀಜಿಯವರು ವಸುಧೈವಕುಟುಂಬಿಗಳಾಗಿ ಜಗತ್ತಿನ ಒಳಿತಿನ ಬಗ್ಗೆ ಚಿಂತಿಸಿದವರು. ಉದಾರಚರಿತರಾಗಿ ಜಗತ್ತಿನ ಜನರ ಕಲ್ಯಾಣಕ್ಕಾಗಿಯೇ ಬದುಕಿದವರು. ಸಂತರಿಗೆ ಸಾವಿಲ್ಲ. ತ್ಯಾಗ, ಸೇವೆ, ತತ್ತ್ವ, ಸಿದ್ಧಾಂತ, ಆಚಾರ ಹಾಗೂ ವಿಚಾರಗಳ ರೂಪದಲ್ಲಿ ಅವರು ಅಜರಾಮರ. ಮಹಾತ್ಮರು ತಾವು ದೇಹದಲ್ಲಿರುವಾಗ ಒಂದೆಡೆ ಮಾತ್ರ ಸಿಗುತ್ತಾರೆ. ಆದರೆ, ಅವರು ದೇಹವನ್ನು ಬಿಟ್ಟ ಮೇಲೆ ಎಲ್ಲೆಲ್ಲೂ ಇರುತ್ತಾರೆ, ಎಲ್ಲೆಲ್ಲೂ ಸಿಗುತ್ತಾರೆ. ಇಂತಹ ಮಹಾತ್ಮರಲ್ಲಿ ಶಿವಕುಮಾರ ಮಹಾಶಿವಯೋಗಿಗಳು ಒಂದು ಅರ್ನ್ಯಘ ರತ್ನ.

(ಲೇಖಕರು ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net