ಆಕರ್ಷಣೆ ಕಳೆದುಕೊಂಡ ಶುಶ್ರೂಷಕ ವೃತ್ತಿ: ಇಂದು ವಿಶ್ವ ನರ್ಸ್ ದಿನ

Nursing
Published on

ಪ್ರಚಲಿತ ಅಸಮತೋಲನದ ವ್ಯವಸ್ಥೆಯಿಂದ ಆರೋಗ್ಯ ಸೇವಾ ವಲಯದಲ್ಲಿ ಶುಶ್ರೂಷಕರಿಗೆ ದೊರೆಯಬೇಕಾದ ಸ್ಥಾನಮಾನ ದೊರೆತಿಲ್ಲ. ನರ್ಸಿಂಗ್ ಪದವೀಧರರಿಗೆ ವಿದೇಶಗಳಲ್ಲಿ ಒಂದು ವರ್ಷಕ್ಕೆ ಅಂದಾಜು 20-25 ಲಕ್ಷ ರೂ. ವೇತನ ದೊರೆಯುತ್ತದೆ. ಆದರೆ, ರಾಜ್ಯದಲ್ಲಿ ವರ್ಷಕ್ಕೆ 2 ಲಕ್ಷ ರೂ. ವೇತನವೂ ಸಿಗುವುದಿಲ್ಲ. ಹೀಗಾಗಿ ನರ್ಸಿಂಗ್ ಪರ್ಯಾಯ ವೃತ್ತಿಯಾಗಿ ಆಕರ್ಷಣೆ ಕಳೆದುಕೊಂಡಿದೆ. ಸದ್ಯ ಪರಿಶೀಲನೆಯಲ್ಲಿರುವ ‘ನರ್ಸಿಂಗ್ ಹಾಗೂ ಸೂಲಗಿತ್ತಿ ವಿಧೇಯಕ’ ಮೇಲಿನ ಕೆಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಆಶಯವಿದೆ. ಕರೊನಾ ಪಿಡುಗಿನಿಂದ ನರ್ಸಿಂಗ್ ಶಿಕ್ಷಣಕ್ಕೆ ನೀಡಬೇಕಾದ ಆದ್ಯತೆ ಇನ್ನಷ್ಟು ಪ್ರಸ್ತುತ ಎನಿಸಿದೆ. ಈ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನರ್ಸಿಂಗ್ ಸೇವೆ ಮತ್ತು ಶಿಕ್ಷಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಚಿಂತನೆ ನಡೆಸಬೇಕಾಗಿದೆ.

ಈ ಬಾರಿಯ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಕ್ಕೆ ‘ನರ್ಸ್​ಸ್ ಎ ವಾಯ್್ಸ ಟು ಲೀಡ್’ ಇನ್ವೆಸ್ಟ್ ಇನ್ ನರ್ಸಿಂಗ್, ರೆಸ್ಪೆಕ್ಟ್ ರೈಟ್ಸ್ ಟು ಸೆಕ್ಯುರ್ ಗ್ಲೋಬಲ್ ಹೆಲ್ತ್’ ಎಂಬ ಧ್ಯೇಯವಾಕ್ಯ ಇಟ್ಟುಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಆರೋಗ್ಯ ಸೇವೆಯಲ್ಲಿ ನಿರತರಾದ ಒಟ್ಟು ಕಾರ್ಯತರ್ಕರಲ್ಲಿ ಶುಶ್ರೂಷಕರ ಹಾಗೂ ಸೂಲಗಿತ್ತಿಯರ ಪ್ರಮಾಣ 2/3 ಇದ್ದು, ಅವರ ಅನುಪಾತ ಒಂದು ಸಾವಿರ ಮಂದಿಗೆ ಶೇಕಡ 1.7 ಮಾತ್ರ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಸಿರುವ ಪ್ರಮಾಣವಾದ ಶೇ.43ಕ್ಕಿಂತ ಭಾರಿ ಕಡಿಮೆ. ಈ ಪ್ರಮಾಣವನ್ನು ತಲುಪಲು ಇನ್ನೂ 24 ಲಕ್ಷ ಶುಶ್ರೂಷಕರ ಅವಶ್ಯಕತೆ ಇದೆ. ಕಳಪೆ ತರಬೇತಿ, ಪ್ರದೇಶವಾರು ಸಿಬ್ಬಂದಿಯ ಅಸಮಾನತೆ, ಅಪ್ರಮಾಣೀಕೃತ ನಡವಳಿಕೆ ಮುಂತಾದ ಸವಾಲುಗಳನ್ನು ಈ ವಲಯ ಎದುರಿಸುತ್ತಿದೆ.

ನರ್ಸಿಂಗ್ ಶಿಕ್ಷಣ ಹಾಗೂ ತರಬೇತಿ ಗುಣಮಟ್ಟ: ಭಾರತದಲ್ಲಿ ನರ್ಸಿಂಗ್ ಶಿಕ್ಷಣ ಬಹುರೂಪಿಯಾಗಿದ್ದು, ಬಿಎಸ್​ಸಿ ನರ್ಸಿಂಗ್, ಡಿಪ್ಲೊಮಾ ಇನ್ ನರ್ಸಿಂಗ್, ಪೋಸ್ಟ್ ಬೇಸಿಕ್ ನರ್ಸಿಂಗ್, ಎಂಎಸ್​ಸಿ ನರ್ಸಿಂಗ್ ಹಾಗೂ ಎನ್​ಪಿಸಿಸಿ (ನರ್ಸ್ ಪ್ರಾಕ್ಟೀಷನರ್ ಇನ್ ಕ್ರಿಟಿಕಲ್ ಕೇರ್) ಮೊದಲಾದ ಕೋರ್ಸ್​ಗಳಿವೆ. ಭಾರತೀಯ ಶುಶ್ರೂಷ ಮಂಡಳಿ ಈ ಶಿಕ್ಷಣದ ಮಾರ್ಗಸೂಚಿ, ತಪಾಸಣೆ, ಪರೀಕ್ಷೆ ಹಾಗೂ ಪ್ರಮಾಣಪತ್ರಗಳ ಮೂಲಕ ನಿಯಂತ್ರಿಸುತ್ತಿದೆ. ಹಾಲಿ ನರ್ಸಿಂಗ್ ಶಿಕ್ಷಣ ಪದ್ಧತಿ ಹಳೆಯದಾಗಿದ್ದು ವೃತ್ತಿಯ ಅಗತ್ಯ ಈಡೇರಿಸುವುದಿಲ್ಲ ಹಾಗೂ ಉನ್ನತಿ ಸಾಧಿಸಲು ಪೂರಕವಾಗಿಲ್ಲ. ನುರಿತ ವಿಷಯಗಳಲ್ಲಿ ಪರಿಣತಿ ಸಾಧಿಸಲು ಸಾಕಷ್ಟು ಸ್ನಾತಕೋತ್ತರ ಕೋರ್ಸ್​ಗಳಿದ್ದು, ಅವುಗಳ ನ್ಯೂನತೆಗಳನ್ನು ಸರಿಪಡಿಸುತ್ತಿಲ್ಲ.

  • ಕೇಂದ್ರ ಸರ್ಕಾರದಿಂದ ಆದೇಶವಿದ್ದರೂ ರಾಜ್ಯ ಸರ್ಕಾರ ನರ್ಸಿಂಗ್ ನಿರ್ದೇಶನಾಲಯ ಸ್ಥಾಪನೆಗೆ ಗಮನಹರಿಸದೆ ಇರುವುದು.
  • ನರ್ಸಿಂಗ್ ಕಾಲೇಜು ಮತ್ತು ಶಾಲೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳು ರಚನೆಯಾಗದಿರುವುದು.
  • ಸರ್ಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ಶೇಕಡ 80 ಹುದ್ದೆಗಳು ಖಾಲಿ ಇರುವುದು.
  • ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಂ.ಎಸ್ಸಿ ನರ್ಸಿಂಗ್ ವಿದ್ಯಾರ್ಹತೆಯುಳ್ಳ ಸ್ಟಾಫ್​ನರ್ಸ್​ಗಳನ್ನು ನರ್ಸಿಂಗ್ ಶಿಕ್ಷಣ ಬೋಧನೆಗಾಗಿ ಸರ್ಕಾರಿ ಕಾಲೇಜುಗಳಲ್ಲಿ ನಿಯೋಜಿಸಿರುವುದು.
  • ನರ್ಸಿಂಗ್ ಕಾಲೇಜಿನಲ್ಲಿ ಬೋಧಕ ಸಿಬ್ಬಂದಿ ವೇತನ ಶ್ರೇಣಿ ನಿಗದಿಪಡಿಸದಿರುವುದು.
  • ನರ್ಸಿಂಗ್ ಶಿಕ್ಷಣಕ್ಕೆ ಮಾನದಂಡ ಅನುಸರಣೆ ಬಗ್ಗೆ ಯಾವುದೇ ಖಾತ್ರಿ ಇಲ್ಲ.
  • ಬಹುತೇಕ ನರ್ಸಿಂಗ್ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳ ಕೊರತೆ, ಬಹುಮುಖ್ಯವಾಗಿ ತರಬೇತಿ ನೀಡಲು ಆಸ್ಪತ್ರೆಗಳು ಇಲ್ಲದಿರುವುದು. ಇದರಿಂದ ನರ್ಸಿಂಗ್ ವೃತ್ತಿಗೆ ಅವಶ್ಯಕವಾದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ.
  • ಖಾಸಗಿ ಆಸ್ಪತ್ರೆಗಳು ನರ್ಸಿಂಗ್ ಶಿಕ್ಷಣ ಪಡೆಯದ ವ್ಯಕ್ತಿಗಳನ್ನು ಶುಶ್ರೂಷಕರ ಹೆಸರಿನಲ್ಲಿ ಮೂರು, ಆರು ತಿಂಗಳ ತರಬೇತಿ ನೀಡಿ ಕಡಿಮೆ ವೇತನ ಕೊಡುತ್ತಿವೆ. ಇದರಿಂದ ರೋಗಿಗಳ ಆರೈಕೆಯ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ.
  • ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿಯರಿಗೆ ಪದೋನ್ನತಿಗೆ ಅವಕಾಶ ಇಲ್ಲದಿರುವುದರಿಂದ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಪ್ರೇರಣೆ ಸಿಗುತ್ತಿಲ್ಲ.
  • ಕರ್ನಾಟಕ ಶುಶ್ರೂಷ ಪರಿಷತ್ ಮತ್ತು ಕರ್ನಾಟಕ ಶುಶ್ರೂಷ ಮಂಡಳಿಗೆ ಅರ್ಹ ರಿಜಿಸ್ಟ್ರಾರ್​ಗಳನ್ನು ನೇಮಕ ಮಾಡಲು ಸರ್ಕಾರದ ನಿರಾಸಕ್ತಿ.
  • ನರ್ಸಿಂಗ್ ಆಡಳಿತ ವಲಯದಲ್ಲಿ ಶೇಕಡ 95 ನರ್ಸಿಂಗೇತರ (ಡಾಕ್ಟರ್ಸ್) ಅಂದರೆ ವೈದ್ಯರು ಆಡಳಿತ ನಡೆಸುತ್ತಿದ್ದು, ನರ್ಸಿಂಗ್ ಶಿಕ್ಷಣ ಮತ್ತು ಸೇವೆ ಇವುಗಳ ಬಗ್ಗೆ ಆಸಕ್ತಿವಹಿಸದೆ ತಾರತಮ್ಯ ಧೋರಣೆ ತಾಳಿರುವುದು.
  • ಉನ್ನತ ವಿದ್ಯಾರ್ಹತೆಯುಳ್ಳವರು ನರ್ಸಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರುತ್ತಾರೆ ಇಲ್ಲವೆ ಅವರಿಗೆ ಮಾನ್ಯತೆ ಇರುವ ದೇಶಗಳಿಗೆ ವಲಸೆ ಹೋಗುವುದರಿಂದ ಶುಶ್ರೂಷಕರ ಅಭಾವ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net