

‘ಅಮಾವಾಸ್ಯೆ’ ಎಂಬುದಕ್ಕೆ ವಿಶೇಷ ಅರ್ಥವಿದೆ. ‘ಅಮಾಯಾಂ ವಸತಃ’ ಅಂದರೆ ಸೂರ್ಯ ಚಂದ್ರರು ಒಂದೇ ಮನೆಯಲ್ಲಿರುವುದು (ಸರಳ ರೇಖೆಯಲ್ಲಿ). ಪ್ರತಿ ವರ್ಷ ಬರುವ ಭಾದ್ರಪದ ಮಾಸದ ಮಹಾಲಯ ಅಮಾವಾಸ್ಯೆ ಎಲ್ಲ ಅಮಾವಾಸ್ಯೆಗಿಂತ ವಿಶೇಷವಾದದ್ದು. ಗತಿಸಿದ ಹಿರಿಯರನ್ನು ಸ್ಮರಿಸುವ ಹಾಗೂ ಅವರಿಗೆ ತರ್ಪಣ ಬಿಡುವ, ಎಡೆ ಹಾಗೂ ಶ್ರಾದ್ಧಗಳನ್ನು ಮಾಡುವ ದಿನವಿದು. ಶ್ರಾದ್ಧವು ‘ಶ್ರದ್ಧಾ’ ಎಂಬ ಪದದಿಂದ ಬಂದಿದೆ. ಇದರಲ್ಲಿ ಪಾರ್ವಣ, ಆಮಾ, ಸಂಕಲ್ಪ ಹಾಗೂ ಹಿರಣ್ಯ ಎಂಬ ನಾಲ್ಕು ವಿಧ. ಮಾನವ ಲೋಕದ ಒಂದು ವರ್ಷದ ಅವಧಿ ಪಿತೃಲೋಕದ ಒಂದು ದಿನಕ್ಕೆ ಸಮ ಎಂದು ಶಾಸ್ತ್ರ ಹೇಳುತ್ತದೆ. ಇದರ ಪ್ರಕಾರ ಈ ಲೋಕದಲ್ಲಿ ನಾವು 365 ದಿನಕ್ಕೊಮ್ಮೆ ಶ್ರಾದ್ಧ ಆಚರಿಸಿದರೆ ಅದು ಪಿತೃಲೋಕದಲ್ಲಿರುವ ಪಿತೃಗಳಿಗೆ ಒಂದು ದಿನದ ಆಹಾರ ಒದಗಿಸಿದಂತೆ. ದೈವಾರಾಧನೆ ಮರೆತರೂ ಶ್ರಾದ್ಧ ಕಾರ್ಯವನ್ನು ಮರೆಯಬಾರದು ಎನ್ನುತ್ತದೆ ಶಾಸ್ತ್ರ. ಏಕೆಂದರೆ ದೇವತೆಗಳಿಗೆ ಹವಿಸ್ಸನ್ನು ಯಜ್ಞ, ಯಾಗ ಹಾಗೂ ಹೋಮಗಳಿಂದ, ಅಗ್ನಿಯಿಂದ ನೀಡುತ್ತೇವೆ. ಅದೇ ರೀತಿ ಪಿತೃದೇವತೆಗಳಿಗೆ ಶ್ರಾದ್ಧ ಮಾಡುವಾಗ ಎಳ್ಳಿನಿಂದ ತರ್ಪಣ ನೀಡುತ್ತೇವೆ ಹಾಗೂ ಅವರಿಗೆ ಇಷ್ಟವಾದ ಪದಾರ್ಥವನ್ನು ಎಡೆ ಇಡುತ್ತೇವೆ. ಸ್ಥೂಲ ಶರೀರದಲ್ಲಿ ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಾವು ಮಾಡುವ ಶ್ರಾದ್ಧಕರ್ಮವನ್ನು ಅವರು ವೀಕ್ಷಿಸುತ್ತಾರೆ. ಇವರ ಆಶೀರ್ವಾದದಿಂದ ವಿವಾಹ, ಸಂತಾನ, ಸುಖ ಹಾಗೂ ಧನಲಾಭವುಂಟಾಗುತ್ತದೆ.
ಶಾಂಡಿಲ್ಯ ಮಹರ್ಷಿ ಮಹಾನ್ ದೈವಭಕ್ತ. ಈತ ಲೋಕಕಲ್ಯಾಣದ ಸಲುವಾಗಿ ನಿರಂತರ ತಪಸ್ಸು ಮಾಡುತ್ತಿದ್ದ. ನಿರಂತರವಾಗಿ ಅಗ್ನಿದೇವನ ಆರಾಧನೆ, ಇಂದ್ರಪೂಜೆಯನ್ನು ಮಾಡಿದನು. ನೂರಾರು ವರ್ಷಗಳ ಕಾಲ ಮಾಡಿದರೂ ಅಗ್ನಿ ಮತ್ತು ಇಂದ್ರರು ಪ್ರತ್ಯಕ್ಷವಾಗಲಿಲ್ಲ. ಶಾಂಡಿಲ್ಯ ಮುನಿ ಚಿಂತಿಸುತ್ತಿದ್ದಾಗ ನಾರದರು ಆಗಮಿಸಿ ಕಾರಣವೇನು ಎಂದು ವಿವರಿಸಿದರು. ‘ನೀನು ನಿನ್ನ ಪಿತೃಕಾರ್ಯ ಬಿಟ್ಟಿರುವುದೇ ಇದಕ್ಕೆ ಕಾರಣ. ಆದ್ದರಿಂದ ಮಹಾಲಯ ಅಮಾವಾಸ್ಯೆ ದಿನ ಪಿತೃಕಾರ್ಯ ಮಾಡು’ ಎಂದರು. ಅದರಂತೆ ಶಾಂಡಿಲ್ಯ ಮುನಿ ಪಿತೃಕಾರ್ಯ ಮಾಡಿದ. ಇದರಿಂದ ಸಂತುಷ್ಟರಾದ ಪಿತೃದೇವತೆಗಳು ಹರಸಿದರು. ನಂತರ ಇಂದ್ರ ಹಾಗೂ ಅಗ್ನಿ ಪ್ರತ್ಯಕ್ಷರಾದರು. ಪಿತೃಗಳ ಕಾರ್ಯ ಮಾಡಲು ಅಶಕ್ತನಾಗಿದ್ದರೆ ಆ ದಿನ ನದಿ ಅಥವಾ ಕೆರೆ ಹತ್ತಿರ ಹೋಗಿ ನೀರು ಹಾಗೂ ಎಳ್ಳಿನಿಂದ ತರ್ಪಣವನ್ನು ಕೊಡಬೇಕು ಎಂದು ಗರುಡ ಪುರಾಣದಲ್ಲಿ ತಿಳಿಸಿದೆ.
ಮತ್ಸ್ಯ ಪುರಾಣದ ಪ್ರಕಾರ ಶ್ರಾದ್ಧಗಳಲ್ಲಿ ಮೂರು ವಿಧ. ನಿತ್ಯ ಶ್ರಾದ್ಧ, ನೈಮಿತ್ತಿಕ ಶ್ರಾದ್ಧ, ಕಾಮ್ಯ ಶ್ರಾದ್ಧ. ನಿತ್ಯ ಶ್ರಾದ್ಧ ಎಂದರೆ- ಪ್ರತಿದಿನವೂ ಪಿತೃಗಳಿಗೆ ಜಲ (ನೀರು) ಅಥವಾ ಎಳ್ಳುಸಹಿತ ನೀರಿನೊಂದಿಗೆ ತರ್ಪಣ ನೀಡುವುದು. ನೈಮಿತ್ತಿಕ ಶ್ರಾದ್ಧ ಎಂದರೆ- ಒಂದು ಉದ್ದೇಶದಿಂದ ಸರಿಯಾದ ಸಮಯದಲ್ಲಿ ನಡೆಸುವ ಶ್ರಾದ್ಧ. ಒಂದು ನಿರ್ದಿಷ್ಟ ದಿನದಂದು ಅಂದರೆ ತಿಥಿ, ನಕ್ಷತ್ರ ಸಮಯವನ್ನು ಅನುಸರಿಸಿ ನಡೆಸುವುದೇ ಕಾಮ್ಯಶ್ರಾದ್ಧ.
ಯಾವ ದಿನ ಶ್ರಾದ್ಧ ಮಾಡಿದರೆ ಯಾವ ಫಲ?: ಶ್ರಾದ್ಧವನ್ನು ಕೃಷ್ಣಪಕ್ಷದಲ್ಲಾಗಲೀ ಶುಕ್ಲಪಕ್ಷದಲ್ಲಾಗಲೀ ಆಚರಿಸಿದರೆ ಆಯಾಯ ತಿಥಿ ದಿನಗಳಿಗೆ ಅನುಸಾರವಾಗಿ ಫಲ ಸಿಗುವುದು. ಪಾಡ್ಯದಿನದಂದು ಶ್ರಾದ್ಧ ಮಾಡಿದರೆ ಉತ್ತಮ ಆರೋಗ್ಯ ಇರುವ ಪುತ್ರನ ಜನನ. ಬಿದಿಗೆ ದಿನ ಉತ್ತಮ ಪುತ್ರಿ ಜನನ, ತದಿಗೆ ದಿನ ಕೀರ್ತಿಲಾಭ, ಚತುರ್ಥಿ ದಿನ ವಾಹನ ಸೌಕರ್ಯ, ಪಂಚಮಿ ದಿನ ಧನಲಾಭ, ಷಷ್ಠಿದಿನ ವ್ಯಾಪಾರದಲ್ಲಿ ಲಾಭ, ಸಪ್ತಮಿ ದಿನ ಭೂಮಿ ಲಾಭ, ಅಷ್ಟಮಿ ದಿನ ವ್ಯಾಪಾರದಲ್ಲಿ ಲಾಭ, ನವಮಿ ಸಂತಾನ ಲಾಭ, ದಶಮಿ ದಿನ ಕೃಷಿಯಲ್ಲಿ ಲಾಭ, ಏಕಾದಶಿ ವಸ್ತ್ರಲಾಭ, ದ್ವಾದಶಿ ಬಂಗಾರ ಲಾಭ, ತ್ರಯೋದಶಿ ಸನ್ಮಾನ ಗೌರವ, ಚತುರ್ದಶಿ ದಿನ ನಿವೇಶನ ಭಾಗ್ಯ, ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನ ಮೋಕ್ಷಪ್ರಾಪ್ತಿ.
(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)