

ಗುರುವಿನಲ್ಲಿ ಅನನ್ಯ ಭಕ್ತಿ, ಶ್ರದ್ಧೆ, ತ್ಯಾಗ, ನಿರ್ವಾಸನಾ ವೈರಾಗ್ಯದ ಸಾಕಾರ ಮೂರ್ತಿಯೇ ಬೆಳದಡಿ ಬ್ರಹ್ಮಾನಂದರು. ರಾಮಕೃಷ್ಣ ಪರಮಹಂಸರಿಗೆ ವಿವೇಕಾನಂದರಂತೆ, ಕಳಸದ ಗೋವಿಂದ ಭಟ್ಟರಿಗೆ ಸಂತ ಶಿಶುನಾಳ ಶರೀಫರಂತೆ, ಸಮರ್ಥ ರಾಮದಾಸರಿಗೆಕಲ್ಯಾಣ ಸ್ವಾಮಿಯಂತೆ ಬ್ರಹ್ಮ ಚೈತನ್ಯ ಮಹಾರಾಜರೆಂದರೆ ಬ್ರಹ್ಮಾನಂದರಿಗೆ ಭಕ್ತಿಯ ಪರಾಕಾಷ್ಠೆ.
ಒಮ್ಮೆ ಮಹಡಿಯ ಮೇಲೆ ಕಸ ತೆಗೆಯುತ್ತಿದ್ದ ಬ್ರಹ್ಮಾನಂದರನ್ನು ಗುರುಗಳು ಕರೆದಾಗ ಮೆಟ್ಟಿಲಿಂದ ಇಳಿಯದೇ ಮಹಡಿ ಮೇಲಿಂದ ಕೆಳಕ್ಕೆ ಜಿಗಿದೇಬಿಟ್ಟರು. ಹಾಗೆಯೇ ಬ್ರಹ್ಮಾನಂದರು ಗೋಂದಾವಲಿಯಲ್ಲಿ ನೆಲೆಸಿದ್ದಾಗ ಅಲ್ಲಿಂದ ಹತ್ತು ಮೈಲಿ ದೂರದ ಊರಿಗೆ ಬ್ರಹ್ಮಚೈತನ್ಯರು ಕುದುರೆಯ ಮೇಲೆ ಹೋಗುತ್ತಿದ್ದರು. ಆಗ ದೇಹದ ಲಕ್ಷ್ಯವೂ ಇಲ್ಲದೆ ಅವರ ಹಿಂದೆಯೇ ಓಡತೊಡಗಿದರು. ಗುರುಗಳು ತಮ್ಮ ಪಾದುಕೆಗಳನ್ನೇ ಕೊಟ್ಟು ಇವನ್ನಾದರೂ ಮೆಟ್ಟಿಕೊಂಡು ಬಾ ಎಂದರೆ ಅವನ್ನೂ ತಲೆಮೇಲೆ ಹೊತ್ತು ಓಡಿದ ಪರಮ ಪುರುಷರು. ಅಂಥ ಅವಿಚ್ಛಿನ್ನ ಗುರುಭಕ್ತಿ ಬ್ರಹ್ಮಾನಂದರದ್ದು.
ಜಾಲಿಹಾಳದ ಬಾಳಂಭಟ್ಟ-ಜೀವೂ ಬಾಯಿ ದಂಪತಿ ಪುತ್ರನಾಗಿ ಜನಿಸಿದ ಅನಂತ ಭಟ್ಟರು (ಬ್ರಹ್ಮಾನಂದರ ಪೂರ್ವಾಶ್ರಮದ ಹೆಸರು) ಬಾಲ್ಯದಲ್ಲಿ ತುಂಟರಾಗಿದ್ದರು. ಜನರಿಂದ ನಿಂದಾವಚನಗಳನ್ನು ಕೇಳಿದರೂ, ತಂದೆಯ ಹಿತವಚನದಂತೆ ಏಕಾಂತದಲ್ಲಿ ಬನಶಂಕರಿಯ ಅನನ್ಯ ಸ್ಮರಣೆ ಮಾಡುತ್ತ ಸರಿರಾತ್ರಿಯಲ್ಲಿ ಹೊಂಡಕ್ಕೆ ಹಾರಲುದ್ಯುಕ್ತರಾಗಿದ್ದರು. ಯಾರೋ ತಡೆದಂತಾಗಿ ಒಂದು ಕ್ಷಣ ಹಾಗೇ ನಿಂತರು. ಕನಸಲ್ಲಿ ಬಂದ ಆ ದೇವಿ, ‘ಇನ್ನಾದರೂ ತುಂಟಾಟ ಬಿಟ್ಟು ವೇದಾಧ್ಯಯನ ಮಾಡು. ನನ್ನ ಸಂಪೂರ್ಣ ಕೃಪಾಶೀರ್ವಾದವಿದೆ’ ಎಂದು ಹೇಳಿದಂತಾಯಿತು. ನೇರವಾಗಿ ಮೆಣಸಿಗಿಗೆ, ಮುಳುಗುಂದಕ್ಕೆ ಬಂದು ವೇದ, ಆರು ಶಾಸ್ತ್ರಗಳ ಅಧ್ಯಯನ ಮಾಡಿದರು. ತೃಪ್ತಿಯಾಗಲಿಲ್ಲ. ಅಲ್ಲಿಂದ ಬೆಳದಡಿಗೆ ತೆರಳಿ ಭಾಗವತ ಶ್ರವಣ ಮಾಡಿದರು. ಒಂದು ರೀತಿಯ ವಿಲಕ್ಷಣ ಅನುಭವವಾಯಿತು. ಕಪ್ಪತಗುಡ್ಡ ಮತ್ತು ವೆಂಕಟಾಪುರದಲ್ಲಿ ಘೊರ ತಪಸ್ಸನ್ನಾಚರಿಸಿದರು. ಆಗ ವೆಂಕಟರಮಣನು ಪ್ರತ್ಯಕ್ಷನಾಗಿ ವರ ಬೇಡು ಎಂದಾಗ ಆತ್ಮೋದ್ಧಾರದ ಗುರುವನ್ನು ತೋರಿಸೆಂದು ಕೇಳಿಕೊಂಡರು. ‘ತಥಾಸ್ತು’ ಎಂಬವರ ಪಡೆದು ಅಂಥ ಗುರುವಿಗಾಗಿ ಹುಡುಕಾಟ ಆರಂಭಿಸಿದ ಅವರಿಗೆ ಇಂದೋರಿನಲ್ಲಿ ಬ್ರಹ್ಮಚೈತನ್ಯರ ದರ್ಶನವಾದಾಗಲೂ, ತಾನು ಹುಡುಕುತ್ತಿರುವ ಗುರು ಇವರೇ ಎಂದೆನಿಸಲೇ ಇಲ್ಲ. ಆದರೆ ನರಸೋಬವಾಡಿಯಲ್ಲಿ ಬ್ರಹ್ಮಚೈತನ್ಯ ಸ್ವಾಮೀಜಿ ಕನಸಿನಲ್ಲಿ ಬಂದು ‘ಇವರೇ ನೀನು ಹುಡುಕುತ್ತಿರುವ ನಿನ್ನ ಆತ್ಮೋದ್ಧಾರದ ಗುರು’ ಎಂದಾಗ ಮತ್ತೆ ಅವರನ್ನು ಹುಡುಕಿ ಶರಣಾದರು.
ಆಗ ಬ್ರಹ್ಮಚೈತನ್ಯರು ಮಾರುತಿಯ ರೂಪದಲ್ಲಿ ದರ್ಶನ ಕೊಟ್ಟು ಆತ್ಮಾನಂದಪೂರ್ವಕ ಆಲಿಂಗನಮಾಡಿ ರಾಮನಾಮ ಉಪದೇಶಿಸಿದರು. ಆ ಕ್ಷಣ ಪರಮಾನಂದದ ಸುಖಸಾಗರದಲ್ಲಿ ತೇಲಾಡಿದ ಅನಂತ ಭಟ್ಟರು ಗೋದಾವರೀ ತೀರದ ಸರ್ಪೇಶ್ವರ ಕ್ಷೇತ್ರದಲ್ಲಿ ಹುಲಿ, ಹಾವು, ಚಿರತೆಯಂಥ ಕ್ರೂರಮೃಗಗಳಿಗೂ ಹೆದರದೆ ಅಖಂಡ ರಾಮನಾಮಸ್ಮರಣಾ ಸಾಗರದಲ್ಲಿ ಮುಳುಗಿದರು. ಅವರ ಕುತ್ತಿಗೆಗೆ ಸುತ್ತಿಕೊಂಡ ಹಾವೊಂದು ಇವರ ಉಸಿರುಗಟ್ಟಿಸುತ್ತಿದ್ದರೂ ಲೆಕ್ಕಿಸದೇ ಮಾಡುತ್ತಿದ್ದ ಅಖಂಡ ರಾಮನಾಮ ಸ್ಮರಣೆಯಿಂದ ಹಾವು ಕೊರಳು ಬಿಟ್ಟಿಳಿಯಿತು. ಆಗ ಶಿಷ್ಯನ ಮುಂದೆ ಪ್ರತ್ಯಕ್ಷರಾದ ಬ್ರಹ್ಮಚೈತನ್ಯ ಮಹಾರಾಜರು ಶಿಷ್ಯನಿಗೆ ‘ಬ್ರಹ್ಮಾನಂದ’ ಪದವಿಯನ್ನು ಪ್ರಸಾದಿಸಿದರು.
ಬ್ರಹ್ಮಾನಂದರು ಅಲ್ಲಿಂದ ಗೋಂದಾವಲಿಗೆ ತೆರಳಿ ಮೇಲುಕೀಳೆಂಬ ಭೇದಭಾವವಿಲ್ಲದೆ ಗುರುಸೇವಾನಿರತರಾಗಿ ಗಂಧದ ಕೊರಡಿನಂತೆ ದೇಹ ಸವೆಸಿದರು. ಅಸಂಖ್ಯಾತ ಜನರನ್ನು ಉಪಾಸನಾ ಮಾರ್ಗದಲ್ಲಿ ತೊಡಗಿಸಿದ ಬ್ರಹ್ಮಾನಂದರು ಬೆಳದಡಿಯಲ್ಲಿ ರಾಮಮಂದಿರ ನಿರ್ವಿುಸಿ ಬ್ರಹ್ಮಚೈತನ್ಯ ಮಹಾರಾಜರ ಅಮೃತ ಹಸ್ತಗಳಿಂದಲೇ ಶ್ರೀರಾಮ ಪ್ರಭುವಿನ ಮೂರ್ತಿ ಪ್ರತಿಷ್ಠಾಪಿಸಿದರು. ತನುಮನದ ತುಂಬ ಶ್ರೀರಾಮನನ್ನೇ ಆವಾಹಿಸಿಕೊಂಡಿದ್ದ ಬ್ರಹ್ಮಾನಂದರು ಭಾದ್ರಪದ ಅಮಾವಾಸ್ಯೆಯಂದು ಕೃಷ್ಣಾ ನದಿ ತೀರದ ನವಭಾಗದಲ್ಲಿ ಶ್ರೀರಾಮಚಂದ್ರನ ಪದತಲದಲ್ಲಿ ಆತ್ಮಸಮರ್ಪಣೆ ಮಾಡಿಕೊಂಡರು.