ಭಗವಾನ್ ಆದಿನಾಥರನ್ನು ಆರಾಧಿಸೋಣ

Adinatha
Published on
| ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ

ವರ್ತಮಾನ ಕಾಲದ ಪ್ರಥಮ ತೀರ್ಥಂಕರರಾದ ಭಗವಾನ್ ಆದಿನಾಥ ಸ್ವಾಮಿಗೆ ವೈಶಾಖ ಶುದ್ಧ ತದಿಗೆಯಂದು ಮೊದಲ ಬಾರಿಗೆ ಮುನಿಗಳ ಪ್ರಥಮ ಆಹಾರ ದಾನವಾದ ಪವಿತ್ರ ದಿನ. ರಾಜ ಆದಿನಾಥರು ಅಯೋಧ್ಯೆಯ ದೊರೆಯಾಗಿ ಬಹಳ ವರ್ಷ ಅಳಿ ಕೊನೆಗೆ ತನ್ನ 99 ಪುತ್ರರಿಗೆ ಹಾಗೂ ಈರ್ವರು ಪುತ್ರಿಯರಿಗೆ ರಾಜ್ಯ ಜವಾಬ್ದಾರಿ ನೀಡಿ ತಾವು ಮುನಿ ದೀಕ್ಷೆ ಸ್ವೀಕರಿಸಿ, ಕಠಿಣ ತಪಗೈಯುತ್ತ ವಿಹಾರ ಮಾಡುತ್ತಿದ್ದರು ಅವರ ಮೌನವ್ರತ ದೀರ್ಘಕಾಲದವರೆಗೆ ಇರುತ್ತಿತ್ತು. ಅವರೇ ಪ್ರಥಮ ಶ್ರಮಣ ಸಾಧುವಾಗಿದ್ದು ಯಾರಿಗೂ ಸಾಧುಚರ್ಯು ತಿಳಿದಿರಲಿಲ್ಲ. ವಿಧಿನಿಯಮ ತಿಳಿದಿರದ ಕಾರಣ ಒಂದು ವರ್ಷದ ಕಾಲ ಅವರಿಗೆ ನಿಯಮಾನುಸಾರ ಭಿಕ್ಷೆ ಆಹಾರ ಸಿಗಲಿಲ್ಲ. ಆ ಕಾಲದಲ್ಲಿ ಆಹಾರ ಕೊಡುವ ವಿಧಿ ನಿಯಮ ಕ್ರಮವನ್ನು ಯಾರೂ ತಿಳಿದಿರಲಿಲ್ಲ. ಹೀಗೆ ಒಂದು ವರ್ಷ ಕಳೆಯಲು ಪರ್ಯಟನ ಮಾಡುತ್ತ ಅವರು ಹಸ್ತಿನಾಪುರಕ್ಕೆ ಆಗಮಿಸಿದರು. ಹಸ್ತಿನಾಪುರದ ರಾಜ ಶ್ರೇಯಾಂಸ ಕುಮಾರನಿಗೆ ಮಾತ್ರ ಮುನಿಗಳಿಗೆ ಆಹಾರ ಕೊಡುವ ವಿಧಾನ ತಿಳಿದಿತ್ತು. ಅವನು ಪ್ರಜಾವತ್ಸಲನಾಗಿದ್ದ. ದಾನಿಯೂ ಆಗಿದ್ದ. ಆಹಾರ ನೀಡುವ ವಿಧಿ ನಿಯಮ ತಿಳಿದಿದ್ದ. ಹೇಗೆಂದರೆ ಹಿಂದಿನ ಭವದಲ್ಲಿ ಆದಿನಾಥರು ವಜ್ರಜಂಘನಾಗಿಯೂ ಆತನ ಮಡದಿ ಶ್ರೀಮತಿಯಾಗಿ ಶ್ರೇಯಾಂಸ ಕುಮಾರನೂ ಇಬ್ಬರು ಚಾರಣ ಮುನಿಗಳಿಗೆ ಆಹಾರ ದಾನ ಮಾಡಿದ್ದರು.

ಪೂರ್ವ ಭವದ ಜಾತಿಸ್ಮರಣೆಯಿಂದ ಶ್ರೇಯಾಂಸ ಕುಮಾರನು ಇಕ್ಷುರಸವನ್ನು ( ಕಬ್ಬಿನ ರಸ) ಆದಿನಾಥರಿಗೆ ನೀಡುವುದರೊಂದಿಗೆ ಆ ದಿನ ಅಕ್ಷಯ ತದಿಗೆ ಎಂದು ಖ್ಯಾತಿಯಾಯಿತು. ಯಾರು ಅಕ್ಷಯ ತದಿಗೆಯಂದು ಕಬ್ಬಿನ ಹಾಲು ಇತ್ಯಾದಿ ದ್ರವ್ಯಗಳಿಂದ ಆದಿನಾಥ ಭಗವಂತರನ್ನು ಅಭಿಷೇಕಾದಿಗಳಿಂದ ಪೂಜಿಸುತ್ತಾರೋ ಅವರಿಗೆ ಅಕ್ಷಯ ಸಂಪತ್ತು, ಪದವಿ, ಸುಖ ಪ್ರಾಪ್ತಿಯಾಗುತ್ತದೆ ಎಂಬ ವಾಡಿಕೆಯಿದೆ. ಈ ಪುಣ್ಯಸಂದರ್ಭದಲ್ಲಿ ನಿರಪೇಕ್ಷ ಭಾವದಿಂದ ಭಗವಂತನ ಭಕ್ತಿ ಮಾಡೋಣ. ಸರ್ವರಿಗೂ ಭಗವಾನ್ ಅದಿನಾಥರ ಕಲ್ಯಾಣ ಗುಣಗಳು ಪ್ರೇರಣೆಯನ್ನುಂಟು ಮಾಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net