

| ಪಂಕಜ ಕೆ.ಎಂ. ಬೆಂಗಳೂರು
ಬಾಲ್ಯದಲ್ಲಿಯೇ ಮಕ್ಕಳನ್ನು ಕಾಡುವ ಆಟಿಸಂ ಜೀವಿತಾವಧಿ ಕಾಡುವ ಅಂಗವಿಕಲತೆ. ಇದಕ್ಕೆ ಒಳಗಾಗಿರುವ ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ (ತರಬೇತಿ), ಚಿಕಿತ್ಸೆ (ಥೆರಪಿ) ಕುರಿತು ಜಾಗೃತಿ ಮೂಡಿಸಲು ಜಾಗತಿಕವಾಗಿ ಆಟಿಸಂ ಜಾಗೃತಿ ದಿನ ಆಚರಿಸಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪಾಲಕರ ಒತ್ತಡದ ದಿನಚರಿ, ಒಂಟಿತನ, ಆಹಾರ ಪದ್ಧತಿ, ಜೀವನ ಶೈಲಿ, ಕೌಟುಂಬಿಕ ಸಮಸ್ಯೆಗಳು, ವಿಭಕ್ತ ಕುಟುಂಬ ಹೀಗೆ ಹಲವಾರು ಕಾರಣಗಳಿಂದಾಗಿ ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳಲ್ಲಿ ಆಟಿಸಂ ಕೂಡ ಒಂದು. ಎಳೆಯ ವಯಸ್ಸಿನಲ್ಲಿಯೇ ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆ ಇದಾಗಿದ್ದು, ಸಾಮಾನ್ಯವಾಗಿ 3ನೇ ವರ್ಷದಲ್ಲಿ ಗುರುತಿಸಲ್ಪಡುತ್ತದೆ. ಅಲ್ಲಿಯವರೆಗೂ ಇದರ ಲಕ್ಷಣಗಳು ಗೋಚರಿಸುವುದಿಲ್ಲ. ಹಾಗಾಗಿ ಸಾಧ್ಯವಾದಷ್ಟು ಮೊದಲೇ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸಿದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಲು ಸಾಧ್ಯವಾಗಲಿದೆ ಎನ್ನುತ್ತಾರೆ ತಜ್ಞರು.
ಆಟಿಸಂ ಲಕ್ಷಣಗಳು: ತನ್ನಷ್ಟಕ್ಕೆ ತಾನು ಮಗ್ನವಾಗುವುದು. ಯಾವುದರ ಪರಿವೆ ಇರುವುದಿಲ್ಲ. ತುಂಟತನ, ಕೋಪ, ಮಾಡಿದ್ದನ್ನೇ ಮಾಡುವುದು ಆಟಿಸಂನ ಲಕ್ಷಣಗಳು. ಸಂಶೋಧನೆಗಳ ಪ್ರಕಾರ ಅನುವಂಶೀಯತೆ, ರಕ್ತ ಸಂಬಂಧದಲ್ಲಿ ವಿವಾಹ, ಹೆಣ್ಣು ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ, ಬೇಗ ಗರ್ಭ ಧರಿಸುವುದು, ಹೆರಿಗೆ ಸಮಯದಲ್ಲಿ ತೊಂದರೆ, ಜನಿಸಿದಾಗ ತೂಕ ಕಡಿಮೆ ಇರುವುದು, ಅವಳಿ ಹಾಗೂ ತ್ರಿವಳಿ ಮಕ್ಕಳು ಜನಿಸುವುದು ಆಟಿಸಂ ತೊಂದರೆಗೆ ಕಾರಣವಾಗಬಹುದು. ಅಲ್ಪ ಪ್ರಮಾಣದ ಆಟಿಸಂನಲ್ಲಿ ಸ್ಪಷ್ಟ ಮಾತಿನ ಕೌಶಲದ ಕೊರತೆ ಇರುತ್ತದೆ. ಮಾತು ಮತ್ತು ವರ್ತನೆಗಳಲ್ಲಿ ಪರಸ್ಪರ ಪ್ರತಿಕ್ರಿಯೆಯ ತೊಂದರೆಗಳನ್ನು ಕಾಣಬಹುದು. ಅಂದರೆ ಕೇಳಿದ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡದಿರುವುದು. ಜೋರಾದ ಶಬ್ದ, ಅತಿ ಬೆಳಕಿನ ಕಿರಣಗಳಿಗೆ ಹೊಂದಿಕೊಳ್ಳದಿರುವುದು ಸಮಸ್ಯೆಯಾಗಿ ಪರಿವರ್ತನೆಯಾಗಬಹುದು.
ಆಟಿಸಂ ಮಕ್ಕಳು ಬುದ್ಧಿಮಾಂದ್ಯರಲ್ಲ: ಆಟಿಸಂ ಒಂದು ರೀತಿಯ ನರ ಸಂಬಂಧಿತ ಕಾಯಿಲೆ. ಇತರೆ ಮಕ್ಕಳಂತೆಯೇ ಇರುವ ಇವರಲ್ಲಿ ಕೆಲವು ನಡವಳಿಕೆಗಳಲ್ಲಿ ಬದಲಾವಣೆಗಳು ಕಂಡು ಬರುತ್ತದೆ. ಅನುವಂಶಿಕವಾಗಿ ಅಥವಾ ನರಗಳ ದೋಷದಿಂದ ಬರುತ್ತದೆ. ಹಿಂದೆಲ್ಲಾ ಇಂತಹ ಮಕ್ಕಳನ್ನು ಬುದ್ಧಿಮಾಂದ್ಯತೆಗೆ ಹೋಲಿಸುತ್ತಿದ್ದರು.
ಆದರೆ ಈಗ ಈ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದ್ದು, ಇದರಿಂದಾಗಿ ಅವರಿಗೆ ವಿಶೇಷ ಶಿಕ್ಷಣ, ಆರೈಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯುತ್ತಿದೆ. ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವೂ ಇದೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ ಪ್ರತಿ ಸಾವಿರ ಮಕ್ಕಳಲ್ಲಿ ಒಬ್ಬರು ಅಥವಾ ಇಬ್ಬರು ಆಟಿಸಂ ಪೀಡಿತರಾಗಿರುತ್ತಾರೆ ಎನ್ನಲಾಗಿದೆ. ಗಂಡು ಮಕ್ಕಳಲ್ಲಿ ಇದರ ಪ್ರಮಾಣ ಶೇ.4 ಹೆಚ್ಚಿರುತ್ತದೆ. ಹಾಗಾಗಿ ಮಕ್ಕಳ ಆರೋಗ್ಯ ಹಾಗೂ ಸ್ವಭಾವದ ಬಗ್ಗೆ ಪೋಷಕರು ಎಚ್ಚರವಹಿಸಬೇಕು. | ಡಾ. ಅಕ್ಷಯ್ ಪಿ. ಜಾದವ್ ಆಟಿಸಂ ತಜ್ಞ