ಮ್ಯಾನ್ಮಾರ್​ ಭೂಕಂಪಕ್ಕೆ 1,600ಕ್ಕೂ ಅಧಿಕ ಮಂದಿ ಬಲಿ – 3,000 ಕ್ಕೂ ಹೆಚ್ಚು ಮಂದಿಗೆ ಗಾಯ! Earthquake

myanmar 2
Published on

earthquake | ಮ್ಯಾನ್ಮಾರ್​ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಪ್ರಬಲ ಭೂಕಂಪದಿಂದಾಗಿ ಇಲ್ಲಿಯವರೆಗೆ ಸುಮಾರು 1600ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಘಟನೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಜೊತೆಗೆ 139 ಜನರು ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ!

ಮ್ಯಾನ್ಮಾರ್‌ನಲ್ಲಿ ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳಲ್ಲಿ ಸ್ಥಳವೇ ಇಲ್ಲದಂತಾಗಿದೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ಸಂಪೂರ್ಣ ಭರ್ತಿಯಾಗಿದ್ದು, ಆಸ್ಪತ್ರೆಯಲ್ಲಿ ಸ್ಥಳ ಸಿಗದ ಕಾರಣ ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಸಾಗಯಿಂಗ್‌ನಿಂದ ಐರಾವಡ್ಡಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸುಮಾರು 100 ವರ್ಷಗಳಷ್ಟು ಹಳೆಯದಾದ ಆವಾ ಸೇತುವೆಯು ನೀರಿನಲ್ಲಿ ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ.

ಭೂಕಂಪ ಸಂಭವಿಸಿದ್ದು ಹೇಗೆ?

ಶುಕ್ರವಾರ (28) ರಂದು ನೆರೆಯ ಆಗ್ನೇಯ ಏಷ್ಯಾದ ದೇಶವಾದ ಥೈಲ್ಯಾಂಡ್‌ ಹಾಗೂ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ ಮ್ಯಾನ್ಮಾರ್​ ತತ್ತರಿಸಿತ್ತು. ಈ ನಡುವೆ ಶುಕ್ರವಾರ (28) ತಡರಾತ್ರಿ ಮತ್ತೆ ಭೂಕಂಪನ ಸಂಭವಿಸಿದೆ. ಭಾರತೀಯ ಕಾಲಮಾನದಲ್ಲಿ ಮಾರ್ಚ್​ 28 ರ ಮಧ್ಯರಾತ್ರಿ 12.30ರ ಸುಮಾರಿಗೆ ಮ್ಯಾನ್ಮಾರ್​ನಲ್ಲಿ ಭೂಕಂಪ ಉಂಟಾಗಿದೆ. ಇನ್ನೂ ಈ ಘಟನೆಯಿಂದ ಮತ್ತಷ್ಟು ಕಟ್ಟಡಗಳು ನೆಲಸಮವಾಗಿವೆ. ರಸ್ತೆ, ವಿದ್ಯುತ್, ನೀರು ಮುಂತಾದ ಮೂಲಸೌಕರ್ಯಗಳು ಹಾಳಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜನಜೀವನ ಅಸ್ತವ್ಯಸ್ತ

ಬೂಕಂಪನದಿಂದಾಗಿ ಕಟ್ಟಡಗಳು ಅಲ್ಲೋಲಕಲ್ಲೋಲಗೊಂಡಿದ್ದು, ಭೂಕಂಪನದ ತೀವೃತೆ ಹೆಚ್ಚಾಗಿದ್ದರಿಂದ ಸ್ಥಳೀಯ ಕೆರೆಗಳಲ್ಲಿದ್ದ ನೀರು ಹೊರಗೆ ಚಿಮ್ಮುತ್ತಿದ್ದ ದೃಶ್ಯಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಪ್ರಬಲವಾಗಿ ಭೂಕಂಪ ಸಂಭವಿಸಿದ ಪರಿಣಾಮ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನೂರಾರು ಜನರು ಭಯಬೀತರಾಗಿದ್ದು, ಗಾಬರಿಗೊಂಡ ಜನರು ಬಹುಮಹಡಿ ಕಟ್ಟಡಗಳು ಹಾಗೂ ಹೋಟೆಲ್‌ಗಳಿಂದ ಹೊರಗೆ ಓಡಿ ಬಂದಿದ್ದರು. ಅಪರೂಪದ ಭೂಕಂಪದಿಂದ ಅನೇಕ ಕಟ್ಟಡಗಳು ಅಲುಗಾಡುತ್ತಿದ್ದರಿಂದ ಕೆಲ ಜನರನ್ನು ಆ ಪ್ರದೇಶದಿಂದ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಿದರು.

ಮ್ಯಾನ್ಮಾರ್ ರಸ್ತೆಗಳಲ್ಲಿ ಕಟ್ಟಡಗಳ ಅವಶೇಷಗಳು, ಹಾಳಾದ ರಸ್ತೆಗಳು, ಹಾಳಾದ ಮನೆಗಳು, ಜಖಂ ಆಗಿರುವ ವಾಹನಗಳು ಎದ್ದು ಕಾಣುತ್ತಿವೆ. ಜನರು ಆಹಾರ, ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ಘಟನೆಯಿಂದಾಗಿ ಎಷ್ಟೋ ಮನೆಗಳು ನೆಲಸಮವಾಗಿದ್ದು, ಎಲ್ಲರೂ ಸಹಾಯಕ್ಕಾಗಿ ಸರ್ಕಾರದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net