ರಾಜಕಾರಣಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ದಂಪತಿಯ ಬಂಧನ

Crime Logo
Published on

ಬೆಂಗಳೂರು: ರಾಜಕಾರಣಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದ ಕೇರಳ ಮೂಲದ ದಂಪತಿ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ವಿದೇಶಗಳಿಂದ ಮದ್ಯ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುವ ವ್ಯವಹಾರ ನಡೆಸುವುದಾಗಿ ನಂಬಿಸಿ ಹೈದ್ರಾಬಾದ್ ಮೂಲಕ ಉದ್ಯಮಿಗೆ ಲಕ್ಷಾಂತರ ರೂ.ವಂಚಿಸಿದ ಕೇರಳ ಮೂಲದ ದಂಪತಿ ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಸುಬೀಷ್ ಪಿ.ವಾಸು ಮತ್ತು ಆತನ ಪತ್ನಿ ಶಿಲ್ಪಾ ಬಂಧಿತರು. ಆರೋಪಿಗಳು ಹೈದ್ರಾಬಾದ್ ಮೂಲದ ಉದ್ಯಮಿ ಕೆ.ಆರ್.ಕಮಲೇಶ್‌ಗೆ ೬೫ ಲಕ್ಷ ರೂ. ವಂಚಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೆಯೇ ವಿಚಾರಣೆ ವೇಳೆ ಆರೋಪಿಗಳು ಈ ಹಿಂದೆ ರಾಜಕೀಯ ಮುಖಂಡ ಹೆಸರು ಹೇಳಿಕೊಂಡು ಚೈನ್‌ಲಿಂಕ್ ಮಾದರಿಯ ವ್ಯವಹಾರ ನಡೆಸುವುದಾಗಿ ನಂಬಿಸಿ ಹತ್ತಾರು ಮಂದಿಗೆ ಕೋಟ್ಯಂತರ ರೂ.ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಬಿಸೆನೆಸ್ ಎಕ್ಸ್‌ಚೇಂಜ್ ಗ್ರೂಪ್ ಎಲ್‌ಎಲ್‌ಪಿ ಕಂಪನಿ ನಡೆಸುತ್ತಿದ್ದು, ಕಂಪನಿ ಹೆಸರಿನಲ್ಲಿ ೨೦೨೨ರಲ್ಲಿ ಕಮಲೇಶ್‌ಗೆ ಕರೆ ಮಾಡಿ, ಲಿಕರ್ ವ್ಯವಹಾರದ ಬಗ್ಗೆ ತಿಳಿಸಿದ್ದರು. ಬಳಿಕ ಮಾರತ್ತಹಳ್ಳಿಯಲ್ಲಿರುವ ಆರೋಪಿಗಳ ಕಂಪನಿಗೆ ಭೇಟಿ ನೀಡಿದ ದೂರುದಾರರಿಗೆ ಮದ್ಯದ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದರು. ವಿದೇಶಗಳಿಂದ ಮದ್ಯವನ್ನು ಭಾರತಕ್ಕೆ ತೆಗೆದುಕೊಂಡು ಬಂದು ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡುತ್ತೇವೆ. ನೀವುಗಳು ಸಹ ಕರ್ನಾಟಕದ ಸಬ್ ಡಿಲರ್‌ಶಿಪ್ ಪಡೆದುಕೊಳ್ಳಿ, ನಂತರ ಮಾರಾಟದ ಎಲ್ಲ ವ್ಯವಹಾರ ನಾವು ನೋಡಿಕೊಳ್ಳುತ್ತೇವೆ ಎಂದ್ದಿದರು. ಅಲ್ಲದೆ ಪ್ರತಿ ಮದ್ಯದ ಬಾಟಲಿಗೆ ೧೨೦ ರೂ. ಲಾಭ ಪಡೆಯಬಹುದು ಎಂದು ನಂಬಿಸಿದ್ದರು. ಹೀಗಾಗಿ ಮುಂಗಡ ಡೆಪಾಸಿಟ್ ಎಂದು ಕಮಲೇಶ್ ಹಂತ-ಹಂತವಾಗಿ ೬೭ ಲಕ್ಷ ರೂ. ಅನ್ನು ಆರೋಪಿಗಳ ಕಂಪನಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು. ಜತೆಗೆ ಅಗ್ರಿಮೆಂಟ್ ಕೂಡ ಮಾಡಿಕೊಂಡಿದ್ದರು.

ಮತ್ತೊಂದೆಡೆ ಕಮಲೇಶ್, ಲಿಕ್ಕರ್ ವ್ಯವಹಾರಕ್ಕಾಗಿ ರೆಡ್ ಗೋಟ್ರೆಡಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿ ಆರಂಭಿಸಿದ್ದರು. ಆದರೆ, ಸುಮಾರು ತಿಂಗಳು ಕಳೆದರೂ ಆರೋಪಿಗಳು ವ್ಯವಹಾರದ ಬಗ್ಗೆ ಮಾಹಿತಿ ನೀಡಲಿಲ್ಲ. ಹೀಗಾಗಿ ಹಣ ವಾಪಸ್ ಕೇಳಿದ್ದಾರೆ. ಒಂದು ತಿಂಗಳ ಒಳಗಾಗಿ ಹಣ ವಾಪಸ್‌ಕೊಡುತ್ತೇವೆ ಎಂದಿದ್ದ ಆರೋಪಿಗಳು ಇದುವರೆಗೂ ಹಣ ನೀಡಿಲ್ಲ ಎಂದು ಕಮಲೇಶ್ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೈನ್ ಲಿಂಕ್ ಮೂಲಕ ಜನರಿಗೆ ಮೋಸ:
ಶಿಲ್ಪಾ ದಂಪತಿ ಚೈನ್ ಲಿಂಕ್ ಮೂಲಕ ಜನರಿಗೆ ಮೋಸ ಮಾಡುತ್ತಿದ್ದರು. ರಾಜಕೀಯ ಪಕ್ಷವೊಂದರ ರಾಜ್ಯಾಧ್ಯಕ್ಷೆ ಎಂದು ಹೇಳಿಕೊಂಡಿದ್ದ ಆರೋಪಿತೆ ಶಿಲ್ಪಾ, ಎನ್‌ಡಿಎ ರಾಷ್ಟ್ರೀಯ ಕಮಿಟಿ ಸದಸ್ಯೆ ಎಂದು ಸಹ ಹೇಳಿಕೊಂಡು ಮೋಸ ಮಾಡುತ್ತಿದ್ದಳು. ರಾಜಕಾರಣಿಗಳ ಜತೆಗೆ ಫೋಟೋ ತೆಗೆಸಿಕೊಂಡಿದ್ದು, ಅದನ್ನೇ ಬಂಡವಾಳ ಮಾಡಿಕೊಂಡಿದ್ದ ದಂಪತಿ, ಜ್ಯೋತಿಷ್ಯದ ಕಥೆ ಕಟ್ಟಿ ಮನೆಯವರ ಬಳಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸುವುದಾಗಿ ವಂಚನೆ ಮಾಡುತ್ತಿದ್ದರು. ಪ್ರಾರಂಭದಲ್ಲಿ ಸ್ವಲ್ಪದಿನ ಹಣ ಕೊಟ್ಟು ನಂಬಿಕೆ ಗಳಿಸುತ್ತಿದ್ದ ದಂಪತಿ, ಹೆಚ್ಚು ಹಣ ಬಂದ ಬಳಿಕ ಬೇರೆ ಕಡೆ ಪರಾರಿಯಾಗುತ್ತಿದ್ದರು. ಅಲ್ಲದೇ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಸಿಕೊಡುವುದು ಸೇರಿ ಬೇರೆ ಬೇರೆ ಮಾದರಿಯಲ್ಲಿ ಅಮಾಯಕರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಪಶ್ಚಿಮ ವಿಭಾಗದಲ್ಲೂ ದಂಪತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಒಬ್ಬರು ದೂರು ಕೊಡುತ್ತಿದ್ದಂತೆ ಇವರು ಜಾಮೀನು ಪಡೆದುಕೊಳ್ಳುತ್ತಿದ್ದರು. ಇದೀಗ ಈ ಕಿಲಾಡಿ ಜೋಡಿಯನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

೧೦ ಕ್ಕೂ ಹೆಚ್ಚು ಪ್ರಕರಣ ದಾಖಲು:
ಲಿಕ್ಕರ್, ತಾಜಾ ಮೀನು ವ್ಯಾಪಾರ ನಡೆಸುತ್ತೇವೆ ಎಂದು ಹಲವರ ಬಳಿ ಕೋಟ್ಯಂತರ ಮೊತ್ತದ ಬಂಡವಾಳ ತೆಗೆದುಕೊಂಡು, ಹಣ ವಾಪಾಸ್ ಮಾಡದೇ ವಂಚಿಸುತ್ತಿದ್ದರು. ಜನರನ್ನು ಮೋಸ ಮಾಡಲು ಐಷಾರಾಮಿ ಕಚೇರಿ ತೆರೆದಿದ್ದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮಂತ್ರಿಗಳ, ಅಧಿಕಾರಿಗಳ ಹೆಸರುಗಳನ್ನು ಮತ್ತು ಅವರ ಜತೆಗಿನ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಅದೂ ಅಲ್ಲದೇ, ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಹಾರ ಮೂಲದ ಆರ್‌ಎಲ್‌ಜೆಪಿ ಪಕ್ಷದ ಮುಖ್ಯಸ್ಥರನ್ನು ಭೇಟಿಯಾಗಿ ಕರ್ನಾಟಕ ರಾಜ್ಯದ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದರು ಎನ್ನಲಾಗಿದೆ. ಅದನ್ನು ಶಿಲ್ಪಾ ಅದನ್ನೂ ತಮ್ಮ ಮೋಸದಾಟಕ್ಕೆ ಉಪಯೋಗಿಸಿಕೊಳ್ಳುತ್ತಿದ್ದರು. ಬಿಸಿನೆಸ್ ಎಕ್ಸೆಚೇಂಜ್ ಗ್ರೂಪ್ ಮತ್ತು ಸೀಫುಡ್ಸ್ ಲಾಜಿಸ್ಟಿಕ್ಸ್ ಪ್ರೈ.ಲಿ. ಎಂಬ ಕಂಪನಿಗಳ ಹೆಸರಿನಲ್ಲಿ ವಿವಿಧೆಡೆ ಕಚೇರಿ ಬದಲಾವಣೆ ಮಾಡಿಕೊಂಡು, ಕಚೇರಿಯ ೭೦ ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಸಂಬಳ ನೀಡದೆ ಮೋಸ ಮಾಡಿದ್ದಾರೆ. ಇವರ ಮೇಲೆ ಈಗಾಗಲೇ ೧೦ ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net