ಕೋಲಾರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

Terror House 14 Jan 20
Published on

ಕೋಲಾರ: ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಐಸಿಸ್ ಸಂಘಟನೆಯ ಶಂಕಿತ ಉಗ್ರ ಮೆಹಬೂಬ್ ಪಾಷಾ ಜತೆ ನಿರಂತರ ಸಂಪರ್ಕದಲ್ಲಿದ್ದರೆನ್ನಲಾದ ಇಬ್ಬರು ಯುವಕರನ್ನು ಕೋಲಾರದಲ್ಲಿ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೋಲಾರದ ಪ್ರಶಾಂತ್ ನಗರದ ಮೊಹಮದ್ ಜಹೀರ್ ಹಾಗೂ ಬೀಡಿ ಕಾರ್ವಿುಕರ ಕಾಲನಿ ನಿವಾಸಿ ಇಮ್ರಾನ್ ಖಾನ್ ಸಿಸಿಬಿ ವಶದಲ್ಲಿರುವ ಯುವಕರು. ಬೆಂಗಳೂರಿನ ಗುರುಪ್ಪನಪಾಳ್ಯದಲ್ಲಿ ನೆಲೆಸಿದ್ದ ಮೆಹಬೂಬ್​ಗೆ ಸ್ಪೋಟಕ ವಸ್ತು ಸಂಗ್ರಹಿಸಿ ಕೊಟ್ಟಿರುವ ಹಾಗೂ ಕೃತ್ಯಕ್ಕೆ ತಾಂತ್ರಿಕ ನೆರವು ನೀಡಿರುವ ಬಗ್ಗೆ ಸಿಸಿಬಿ ಪೊಲೀಸರು ಶಂಕಿಸಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಶಂಕಿತ ಉಗ್ರ ಮೆಹಬೂಬ್ ಪಾಷಾ ಕೋಲಾರದ ಅಂತರಗಂಗೆ ಬೆಟ್ಟ, ತೇರಹಳ್ಳಿ ಬೆಟ್ಟ, ರಹಮತ್​ನಗರ, ಸುಲ್ತಾನ್ ತಿಪ್ಪಸಂದ್ರ ಹಾಗೂ ಸಾರಿಗೆ ನಗರ ಇನ್ನಿತರ ಪ್ರದೇಶಗಳಿಗೆ ಬಂದು ಹೋಗಿದ್ದ. ಇದೇ ಪ್ರದೇಶಗಳಿಂದ ಮೆಹಬೂಬ್​ಗೆ ಇಂಟರ್​ನೆಟ್ ಸೌಲಭ್ಯ ಸೇರಿ ಇನ್ನಿತರ ನೆರವು ಸಿಕ್ಕಿದೆ. ಆತನಿಗೆ ಇಲ್ಲಿಂದಲೇ ಕೆಲ ಸ್ಪೋಟಕ ವಸ್ತುಗಳು ಪೂರೈಕೆಯಾಗಿರುವ ಶಂಕೆ ಇದೆ. ಮೊಬೈಲ್ ಕರೆಗಳ ಲೊಕೇಷನ್ ಹಾಗೂ ಐಪಿ ಅಡ್ರೆಸ್ ಜಾಡು ಹಿಡಿದು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

10 ವರ್ಷದ ಬಳಿಕ ಉಗ್ರ ಜಾಡು: ಎನ್​ಐಎ ಅಧಿಕಾರಿಗಳು 10 ವರ್ಷದ ಹಿಂದೆ ಮುಳಬಾಗಿಲಿನಲ್ಲಿ ಕಾರ್ಯಾಚರಣೆ ನಡೆಸಿ ಮದರಸಾದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬನನ್ನು ಉಗ್ರರಿಗೆ ಸಹಾಯ ಮಾಡಿದ್ದ ಆರೋಪದ ಮೇಲೆ ಬಂಧಿಸಿ ಕರೆದೊಯ್ದಿದ್ದರು. ಅದಾದ ಬಳಿಕ ಕೋಲಾರದಲ್ಲಿ ಈಗ ಉಗ್ರ ಜಾಡು ಪತ್ತೆಯಾಗಿದೆ.

ಉಗ್ರಚಟುವಟಿಕೆ ನಡೆದಿದೆ ಎನ್ನುವ ಸುಳಿವಿನ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾ ಚರಣೆ ನಡೆಸಿದ್ದಾರೆ. ಜಿಲ್ಲಾ ಪೊಲೀಸರು ತೀವ್ರ ನಿಗಾವಹಿಸಿದ್ದು, ಸಾರ್ವ ಜನಿಕರು ಆತಂಕಪಡಬೇಕಿಲ್ಲ. | ಕಾರ್ತಿಕ್ ರೆಡ್ಡಿ, ಎಸ್​ಪಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net