ಸ್ನೇಹಿತನ ಕೊಲೆಗೈದಿದ್ದ ಇಬ್ಬರ ಬಂಧನ

arrested
Published on

ಬೆಂಗಳೂರು: ಮದ್ಯ ಸೇವಿಸಿ ಬಂದು ಜಗಳ ಮಾಡುತ್ತಿದ್ದ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಸುಜೀತ್(೨೨) ಕೊಲೆಯಾದವ. ಕೃತ್ಯ ಎಸಗಿದ ಆತನ ಸ್ನೇಹಿತರಾದ
ಅಮನ್(೨೪) ಮತ್ತು ಸಂಜಿತ್ ವರ್ಮ (೨೪) ನನ್ನು ಬಂಧಿಸಲಾಗಿದೆ. ಆರೋಪಿಗಳು ಅ.೩ರಂದು ರಾತ್ರಿ ತಮ್ಮ ಸ್ನೇಹಿತ ಸುಜೀತ್ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮೂಲದ ಸುಜೀತ್ ಹಾಗೂ ಇಬ್ಬರು ಆರೋಪಿಗಳು ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಬಿಳೇಕಹಳ್ಳಿಯಲ್ಲಿರುವ ಫ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿಯೇ ಅಲ್ಲಿಯೇ ಮಲಗುತ್ತಿದ್ದರು. ಆದರೆ, ಸುಜೀತ್ ಸರಿಯಾಗಿ ಕೆಲಸ ಮಾಡಿಸುತ್ತಿರಲಿಲ್ಲ. ಜತೆಗೆ ಮದ್ಯ ಸೇವಿಸುತ್ತಿದ್ದ. ಅದರಿಂದ ಮೂವರು ಸ್ನೇಹಿತರ ನಡುವೆ ಜಗಳವಾಗಿತ್ತು.ಈ ಮಧ್ಯೆ ಸುಜೀತ್‌ನನ್ನು ಮಾಲೀಕರು ಕೆಲಸದಿಂದ ತೆಗೆದಿದ್ದರು. ಅದರಿಂದ ಕೋಪಗೊಂಡಿದ್ದ ಸುಜೀತ್ ಬೇರೆಡೆ ವಾಸವಾಗಿದ್ದ. ಆದರೂ ಫ್ಲೈವುಡ್ ಅಂಗಡಿ ಬಳಿ ಬಂದು, ಮಾಲೀಕರು ಕೆಲಸದಿಂದ ತೆಗೆಯಲು ನೀವುಗಳೇ ಕಾರಣ ಎಂದು ಗಲಾಟೆ ಮಾಡುತ್ತಿದ್ದ. ಗುರುವಾರ ರಾತ್ರಿ ೮ ಗಂಟೆ ಸುಮಾರಿಗೆ ಮದ್ಯ ಸೇವಿಸಿ ಬಂದಿದ್ದ ಸುಜೀತ್, ಆರೋಪಿಗಳ ಜತೆ ಜಗಳ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ಆರೋಪಿಗಳು ಸುಜೀತ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಆತಂಕಗೊಂಡ ಆರೋಪಿಗಳು ಸ್ಥಳದಿಂದ ಪಾರಾರಿಯಾಗಿದ್ದಾರೆ. ಕೆಲ ಹೊತ್ತಿನ ಬಳಿಕ ಇತರೆ ಕಾರ್ಮಿಕರು ಅಂಗಡಿಗೆ ಬಂದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಕೆಲ ಹೊತ್ತಿನಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತನ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net