

ಬೆಂಗಳೂರು:ಎಚ್‌ಎಎಲ್ ಬಳಿಯ ವಾಯುಸೇನಾ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ವ್ಯಕ್ತಿಯನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ರಾಜ್ಕುಮಾರ್ (೩೮) ಬಂಧಿತ.
ಕೂಲಿ ಕಾರ್ಮಿಕನಾದ ರಾಜ್ಕುಮಾರ್, ಕೆಲ ತಿಂಗಳುಗಳ ಹಿಂದೆ ನಗರಕ್ಕೆ ಬಂದಿದ್ದ. ವಾಯುಸೇನಾ ಪ್ರದೇಶದ ಕಾಂಪೌಂಡ್‌ನ ಹಿಂಭಾಗದಲ್ಲಿ ಕೂಲಿ ಕಾರ್ಮಿಕರ ಶೆಡ್‌ಗಳಿದ್ದು, ಅಲ್ಲಿ ರಾಜ್ಕುಮಾರ್ ವಾಸವಾಗಿದ್ದ. ಆರೋಪಿಯು ಆ.೧೮ರಂದು ಸಂಜೆ ಪಾನಮತ್ತನಾಗಿ ಮದ್ಯದ ನಶೆಯಲ್ಲಿ ವಾಯುಸೇನಾ ಪ್ರದೇಶದ ಕಾಂಪೌಂಡ್ ಹತ್ತಿ ಒಳ ಹೋಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಯುಸೇನಾ ತಾಂತ್ರಿಕ ಪ್ರದೇಶದ ಬಳಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ರಾಜ್ಕುಮಾರ್‌ನನ್ನು ನೋಡಿದ ರಕ್ಷಣಾ ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದರು. ಆರೋಪಿಯು ಉದ್ದೇಶಪೂರ್ವಕವಾಗಿ ವಾಯುಸೇನಾ ಪ್ರದೇಶಕ್ಕೆ ಹೋಗಿಲ್ಲ. ಬದಲಿಗೆ ಮದ್ಯದ ನಶೆಯಲ್ಲಿ ಈ ರೀತಿ ಮಾಡಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.