ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರ ಬಂಧನ

Crime Logo
Published on

ಬೆಂಗಳೂರು: ಹಣಕಾಸು ವಿಚಾರವಾಗಿ ಜಗಳ ನಡೆದು ಕಂಪ್ಯೂಟರ್ ಡೀಲರೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ರೌಡಿಶೀಟರ್ ಸೇರಿ ಮೂವರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಲ್ಲಸಂದ್ರದ ಹನುಮಗಿರಿನಗರದ ಕಿರಣ್ ಕುಮಾರ್(೩೫), ಸಾರ್ವಭೌಮನಗರದ ಸೋಮಶೇಖರ್(೩೬) ಹಾಗೂ ತ್ಯಾಗರಾಜನಗರದ ರೌಡಿ ಅರುಣ್ ಕುಮಾರ್ (೩೨) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮರದ ದೊಣ್ಣೆ, ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಆರೋಪಿ ಅನಿಲ್ ಕುಮಾರ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ. ಇಟ್ಟುಮಡು ನಿವಾಸಿ ಹಾಗೂ ಲ್ಯಾಪ್‌ಟಾಪ್-ಕಂಪ್ಯೂಟರ್ ಡೀಲರ್ ಸಂದೀಪ್ ಕುಮಾರ್(೩೨) ಎಂಬಾತನನ್ನು ಆ.೩೦ರ ಮುಂಜಾನೆ ಅಪಹರಿಸಿ ತಮಿಳುನಾಡಿಗೆ ಕರೆದೊಯ್ದು ಕೂಡಿ ಹಾಕಿ ೫೦ ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಸಂದೀಪ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ:
ಆ.೩೦ರಂದು ಮುಂಜಾನೆ ಸ್ನೇಹಿತ ಅನಿಲ್ ಕುಮಾರ್, ಸಂದೀಪ್ ಮೊಬೈಲ್‌ಗೆ ಕರೆ ಮಾಡಿ ಮನೆಗೆ ಹೊರಗೆ ಬರುವಂತೆ ಕರೆದಿದ್ದ. ಅದರಂತೆ ಸಂದೀಪ್ ಮನೆಯಿಂದ ಹೊರಗೆ ಬರುತ್ತಿದ್ದಂತೆ ಮೂವರು ಆರೋಪಿಗಳು ಟೀ ಕುಡಿಯೋಣ ಬಾ ಎಂದು ಬಲವಂತವಾಗಿ ಸಂದೀಪ್‌ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಕಾರು ಸ್ವಲ್ಪ ದೂರು ಹೋಗುತ್ತಿದ್ದಂತೆ ಸಂದೀಪ್‌ನ ಮೊಬೈಲ್ ಕಿತ್ತುಕೊಂಡು ಸಿಮ್ ಬಿಚ್ಚಿ ಎಸೆದು ೫೦ ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸಂದೀಪ್ ಹಣ ಇಲ್ಲ ಎಂದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೈಗಳಿಂದ ಹಲ್ಲೆ ಮಾಡಿದ್ದರು. ಬಳಿಕ ಆರೋಪಿಗಳು ತಮಿಳುನಾಡಿನ ಡೆಂಕಣಿಕೋಟೆ ಕಡೆಗೆ ಕರೆದೊಯ್ದು ಫಾರ್ಮ್ ಹೌಸ್‌ನಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಅಷ್ಟೊಂದು ಹಣವಿಲ್ಲ ಎಂದಾಗ ಮರದ ದೊಣ್ಣೆಯಿಂದ ಸಂದೀಪ್‌ಗೆ ಹಲ್ಲೆ ಮಾಡಿದ್ದರು. ಹಣ ಕೊಡದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು. ಸಂಜೆ ೪.೩೦ರ ಸುಮಾರಿಗೆ ಫಾರ್ಮ್ ಹೌಸ್‌ನಿಂದ ಬೇರೆ ಕಡೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆರೋಪಿ ಅರುಣ್ ಮತ್ತು ಕಿರಣ್ ಊಟಕ್ಕೆ ತೆರಳಿದ್ದರು.
ತಪ್ಪಿಸಿಕೊಂಡು ಬಂದು ದೂರು ನೀಡಿದ್ದ:
ಈ ವೇಳೆ ಕಾರಿನ ಮುಂದಿನ ಆಸನದಲ್ಲಿದ್ದ ಸೋಮಶೇಖರ್ ಮತ್ತು ಅನಿಲ್ ನಿದ್ದೆಗೆ ಜಾರಿದ್ದಾರೆ. ಈ ಸಮಯ ಬಳಸಿಕೊಂಡು ಸಂದೀಪ್ ಕಾರಿನಿಂದ ಕೆಳಗೆ ಇಳಿದು ತಪ್ಪಿಸಿಕೊಂಡು ತಮಿಳುನಾಡಿನ ಅಚ್ಚಿತಾ ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ವಿವರಿಸಿದ್ದಾರೆ. ಬಳಿಕ ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿ ಬೆಂಗಳೂರಿಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂದೀಪ್ ಹಾಗೂ ಆರೋಪಿಗಳು ಪರಸ್ಪರ ಪರಿಚಿತರಾಇದ್ದು. ಬಂಧಿತ ಮೂವರು ಆರೋಪಿಗಳ ಪೈಕಿ ಅರುಣ್ ರೌಡಿಶೀಟರ್ ಆಗಿದ್ದು, ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಸಂದೀಪ್ ಮತ್ತು ಆರೋಪಿ ಅನಿಲ್ ನಡುವೆ ಹಣಕಾಸು ವ್ಯವಹಾರ ಇತ್ತು. ಈ ವಿಚಾರವಾಗಿ ಆರೋಪಿಗಳು ಸಂದೀಪ್‌ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net