

ಬೆಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಮಹಿಳಾ ಮಸಾಜ್ ಥೆರಪಿಸ್ಟ್‌ಗೆ ಬೆದರಿಕೆ ಹಾಕಿ ೧.೫೦ ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿನಗರದ ಮಹೇಂದ್ರ ಕುಮಾರ್(೩೩) ಬಂಧಿತ. ಜು.೩ರಂದು ಈ ಘಟನೆ ನಡೆದಿದೆ. ಕೋರಮಂಗಲ ೬ನೇ ಬ್ಲಾಕ್ ನಿವಾಸಿ ೨೫ ವರ್ಷದ ಮಹಿಳಾ ಮಸಾಜ್ ಥೆರಪಿಸ್ಟ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮಸಾಜ್ ಥೆರಪಿಸ್ಟ್ ನಗರದ ಕೋರಮಂಗಲದ ೬ನೇ ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ಆನ್‌ಲೈನ್‌ನಲ್ಲಿ ಬುಕಿಂಗ್ ಪಡೆದು ಗ್ರಾಹಕರು ಕರೆಯುವ ಸ್ಥಳಕ್ಕೆ ತೆರಳಿ ಮಸಾಜ್ ಥೆರಪಿ ಮಾಡುತ್ತಾರೆ. ಜು.೩ರಂದು ರಾತ್ರಿ ೯.೩೦ಕ್ಕೆ ಆರೋಪಿ ಮಹೇಂದ್ರ ಕುಮಾರ್, ಸುರೇಶ್ ಹೆಸರಿನಲ್ಲಿ ಮಸಾಜ್‌ಗಾಗಿ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ್ದಾನೆ. ಈ ವೇಳೆ ಕರೆ ಮಾಡಿರುವ ಆತ ರಾಮಮೂರ್ತಿನಗರದ ನವ್ಯ ನಿಸರ್ಗ ಅಪಾರ್ಟ್‌ಮೆಂಟ್ ಬಳಿ ಬರುವಂತೆ ತಿಳಿಸಿದ್ದಾನೆ.
ರಾತ್ರಿ ೧೦.೩೦ಕ್ಕೆ ಆರೋಪಿ ನೀಡಿದ್ದ ವಿಳಾಸಕ್ಕೆ ತೆರಳಿದ್ದಾರೆ. ಈ ವೇಳೆ ಆರೋಪಿಗೆ ಕರೆ ಮಾಡಿ ಅಪಾರ್ಟ್‌ಮೆಂಟ್ ಬಳಿ ಬಂದಿರುವುದಾಗಿ ಹೇಳಿದ್ದಾರೆ. ಈ ವೇಳೆ ಚಾಲಕನೊಂದಿಗೆ ಕಾರಿನಲ್ಲಿ ಬಂದಿರುವ ಆರೋಪಿಯು ಮಹಿಳೆಯನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ.
ಬೆದರಿಸಿ ೧೦ ಲಕ್ಷಕ್ಕೆ ಬೇಡಿಕೆ:
ಕಾರು ಸ್ವಲ್ಪ ದೂರ ಚಲಿಸಿದ ಬಳಿಕ ಏಕಾಏಕಿ ಆಕೆಯ ಮೇಲೆ ಹಲ್ಲೆ ಮಾಡಿರುವ ಆರೋಪಿಯು, ನಾನು ಪೊಲೀಸ್ ಅಧಿಕಾರಿ. ನನಗೆ ಹಣ ಕೊಡಬೇಕು. ಇಲ್ಲವಾದರೆ ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ೧೦ ಲಕ್ಷ ರೂ. ಕೊಡುವಂತೆ ಬೇಡಿಕೆ ಇರಿಸಿದ್ದಾನೆ. ಇದಕ್ಕೆ ಮಹಿಳೆ, ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಯು, ಹಣ ಕೊಡಲೇಬೇಕು. ನಿನ್ನ ಸ್ನೇಹಿತರು ಅಥವಾ ಸಂಬಂಧಿಕರಿಗೆ ಕರೆ ಮಾಡಿ ಹಣ ತರಿಸು ಎಂದು ಬೆದರಿಕೆ ಹಾಕಿದ್ದಾನೆ.
ಈ ವೇಳೆ ಥೆರಪಿಸ್ಟ್ ತನ್ನ ಸ್ನೇಹಿತನಿಗೆ ಕರೆ ಮಾಡಿದಾಗ, ಆರೋಪಿಯೇ ಮೊಬೈಲ್ ಕಿತ್ತುಕೊಂಡು ಮಾತನಾಡಿದ್ದಾನೆ. ಬಳಿಕ ಸ್ಕ್ಯಾನರ್ ಕಳುಹಿಸಿ, ಗೂಗಲ್ ಪೇ ಮುಖಾಂತರ ಥೆರಪಿಸ್ಟ್‌ನ ಸ್ನೇಹಿತನಿಂದ ಒಂದು ಲಕ್ಷ ರೂ. ಹಣವನ್ನು ಹಾಕಿಸಿಕೊಂಡಿದ್ದಾನೆ. ಬಳಿಕ ಮತ್ತೆ ಥೆರಪಿಸ್ಟ್‌ನಿಂದ ಸ್ನೇಹಿತನಿಗೆ ಕರೆ ಮಾಡಿಸಿ ಖಾತೆಗೆ ೫೦ ಸಾವಿರ ರೂ. ಹಣ ಹಾಕಿಸಿಕೊಂಡಿದ್ದಾನೆ. ಬಳಿಕ ಆ ಹಣವನ್ನು ತನ್ನ ಸಹಚರರ ಮುಖಾಂತರ ಎಟಿಎಂನಲ್ಲಿ ಡ್ರಾ ಮಾಡಿಸಿದ್ದಾನೆ.
ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುತ್ತೇನೆ :
ನಂತರ ಆರೋಪಿಯು ನೀನು ಇಲ್ಲಿ ಇರಬೇಡ. ನಿನ್ನ ಸ್ವಂತ ಊರು ಪಶ್ಚಿಮ ಬಂಗಾಳಕ್ಕೆ ಹೋಗು. ಇಲ್ಲವಾದರೆ, ನಿನ್ನ ಮೇಲೆ ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುತ್ತೇನೆ ಎಂದು ಹೆದರಿಸಿದ್ದಾನೆ. ಬಳಿಕ ಅದೇ ಕಾರಿನಲ್ಲಿ ರಾತ್ರಿ ವೈಟ್‌ಫೀಲ್ಡ್, ಕೋರಮಂಗಲ, ಹೆಬ್ಬಾಳ ಸೇರಿದಂತೆ ಇತರೆ ಸ್ಥಳಗಳಲ್ಲಿ ಸುತ್ತಾಡಿಸಿ, ಮುಂಜಾನೆ ೪.೩೦ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ನಂತರ ಆಕೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವರಿಗೆ ವಂಚನೆ:
ಆರೋಪಿ ಮಹೇಂದ್ರ ಕುಮಾರ್ ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದಿಸಲು ಈ ರೀತಿಯ ವಂಚನೆ ಕೃತ್ಯಗಳಿಗೆ ಇಳಿದಿದ್ದ. ಈ ಹಿಂದೆಯೂ ಆರೋಪಿಯು ಮಾರತಹಳ್ಳಿ, ಪುಲಿಕೇಶಿನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವರಿಗೆ ವಂಚನೆ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.