

ಬೆಂಗಳೂರು: ಕ್ರಿಕೆಟ್ ಆಡುವಾಗ ನಡೆದ ಜಗಳದ ವಿಚಾರವಾಗಿ ಮಾತನಾಡಲು ಕರೆಸಿ ಸಹೋದರರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮೂವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರಳೂರು ನಿವಾಸಿಗಳಾದ ರಮೇಶ್ ಪವನ್ ಮತ್ತು ಯಶ್ವಂತ್ ಬಂಧಿತರು. ಆ.೯ರಂದು ರಾತ್ರಿ ೭ ಗಂಟೆ ಸುಮಾರಿಗೆ ಹರಳೂರು ರಸ್ತೆಯ ಆಂಬೂರ್ ದಮ್ ಬಿರಿಯಾನಿ ಹೋಟೆಲ್ ಬಳಿ ಸಹೋದರರಾದ ಜೀವನ್ ಜೋಯೆಲ್ ಮತ್ತು ಜೋಸೆಫ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಜೀವನ್ ಸಹೋದರರು ಹಾಗೂ ಆರೋಪಿಗಳು ಸ್ನೇಹಿತರು. ಇತ್ತೀಚೆಗೆ ಕ್ರಿಕೆಟ್ ಆಡುವಾಗ ಸೋಲು-ಗೆಲುವು ವಿಚಾರವಾಗಿ ಎರಡೂ ಗುಂಪುಗಳ ನಡುವೆ ಗಲಾಟೆಯಾಗಿತ್ತು. ಆ.೯ ರಂದು ಆರೋಪಿ ರಮೇಶ್, ಜೀವನ್‌ಗೆ ಕರೆ ಮಾಡಿ ಯಾವುದೋ ವಿಚಾರದ ಬಗ್ಗೆ ಮಾತನಾಡುವುದಾಗಿ ಹರಳೂರು ರಸ್ತೆಯ ಅಂಬೂರ್ ದಮ್ ಬಿರಿಯಾನಿ ಹೋಟೆಲ್ ಬಳಿ ಬರುವಂತೆ ಕರೆದಿದ್ದಾನೆ. ಅದರಂತೆ ಜೀವನ್ ತನ್ನ ಸಹೋದರ ಜೋಸೆಫ್ ಜತೆಗೆ ಅಲ್ಲಿಗೆ ಬಂದಿದ್ದಾನೆ.
ಈ ವೇಳೆ ಎರಡೂ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಈ ವೇಳೆ ಆರೋಪಿಗಳಾದ ರಮೇಶ್, ಪವನ್ ಹಾಗೂ ಇತರರು ಹೋಟೆಲ್‌ನ ಸೌಟು, ಬಾಂಡಲಿ, ವಾಟರ್ ಕ್ಯಾನ್‌ಗಳಿಂದ ಜೀವನ್ ಮತ್ತು ಆತನ ಸಹೋದರನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇದೊಂದು ಕ್ಷುಲ್ಲಕ ಕಾರಣಕ್ಕೆ ನಡೆದಿರುವ ಗಲಾಟೆ. ಹಲ್ಲೆಗೊಳಗಾದವರು ಹಾಗೂ ಆರೋಪಿಗಳು ಸ್ನೇಹಿತರು. ಇವರು ಈ ಹಿಂದೆ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.