ಪತ್ನಿಗೆ ಚಾಕುವಿನಿಂದ ಇರಿದ್ದಿದ್ದ ಪತಿಯ ಬಂಧನ

arrested
Published on

ಬೆಂಗಳೂರು : ಮದ್ಯ ಸೇವಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಪತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರದ ದೊಡ್ಡನಾಗಮಂಗಲ ನಿವಾಸಿ ಮೈಮುದಾ(೨೮) ಚಾಕು ಇರಿತಕ್ಕೆ ಒಳಗಾದವರು. ಕೃತ್ಯ ಎಸಗಿದ ಆಕೆಯ ಪತಿ ಮೊಹಮ್ಮದ್(೩೪) ಎಂಬಾತನನ್ನು ಬಂಧಿಸಲಾಗಿದೆ.
ರಾಯಚೂರು ಮೂಲದ ಮೊಹಮ್ಮದ್ ಮತ್ತು ಮೈಮುದಾ ೧೫ ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಮೊಹಮ್ಮದ್ ಕೂಲಿ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆೆ ವಿಪರೀತ ಮದ್ಯದ ಚಟ ಅಂಟಿಸಿಕೊಂಡಿದ್ದ ಆರೋಪಿಯು ನಿತ್ಯ ಕುಡಿದು ಬಂದು ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆೆ ನಡೆಸುತ್ತಿದ್ದ. ಹೀಗಾಗಿ ಮೈಮುದಾ ಒಂದು ವರ್ಷದ ಹಿಂದೆ ತನ್ನ ಮೂವರು ಮಕ್ಕಳನ್ನು ಕರೆತಂದು ನಗರದ ದೊಡ್ಡನಾಗಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಮನೆ ಕೆಲಸ ಮಾಡುತ್ತಿದ್ದರು.
ಪದೇ ಪದೇ ಮನೆಗೆ ಬಂದು ಜಗಳ:
ಮತ್ತೊಂದೆಡೆ ಆರೋಪಿ ಒಂದೆರಡು ತಿಂಗಳಿಗೊಮ್ಮೆ ಪತ್ನಿ ಮನೆಗೆ ಬಂದು ಕುಡಿಯಲು ಹಣ ಕೇಳುತ್ತಿದ್ದ. ಒಂದು ವೇಳೆ ಆಕೆ ಕೊಡಲು ನಿರಾಕರಿಸಿದರೆ ಗಲಾಟೆ ಮಾಡಿ ಹಲ್ಲೆೆ ಮಾಡುತ್ತಿದ್ದ. ಆರೋಪಿ ಶನಿವಾರ ರಾತ್ರಿ ಮದ್ಯ ಸೇವಿಸಿ ಪತ್ನಿ ಜತೆ ಗಲಾಟೆ ಮಾಡಿದ್ದಾನೆ. ಈ ವೇಳೆಯೂ ಕುಡಿಯಲು ಹಣ ಕೇಳಿದ್ದಾನೆ. ಆಗ ಆಕೆ ಹಣ ಕೊಡಲು ನಿರಾಕರಿಸಿದಾಗ ಆಕ್ರೋಶಗೊಂಡು ಮನೆಯಲ್ಲಿದ್ದ ಚಾಕುವಿನಿಂದ ಆಕೆಯ ಭುಜ ಹಾಗೂ ಎದೆ ಭಾಗಕ್ಕೆೆ ಇರಿದಿದ್ದಾನೆ. ಅದನ್ನು ಕಂಡ ಸ್ಥಳೀಯರು ಕೂಡಲೇ ಜಗಳ ಬಿಡಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೈಮುದಾ ಅವರನ್ನು ಸಮೀಪದ ಆಸ್ಪತ್ರೆೆಗೆ ದಾಖಲಿಸಿದ್ದಾರೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ಸೆರೆ:
ರಾತ್ರಿ ೯ ಗಂಟೆ ಸುಮಾರಿಗೆ ಆರೋಪಿ ಮನೆಗೆ ಬಂದಾಗ ಮೈಮುದಾ ಮಕ್ಕಳು ಸಮೀಪದಲ್ಲೇ ಇರುವ ಮಾವನ ಮನೆಗೆ ಹೋಗಿದ್ದರು. ಘಟನೆ ವಿಚಾರ ತಿಳಿದು ನಂತರ ಸ್ಥಳಕ್ಕೆೆ ಧಾವಿಸಿದ್ದಾರೆ. ಮಕ್ಕಳು ಹಾಗೂ ಸ್ಥಳೀಯರ ಹೇಳಿಕೆಯನ್ನು ಪಡೆಯಲಾಗಿದ್ದು, ಆರೋಪಿ ಕುಡಿದು ಬಂದು ಮೈಮುದಾ ಮೇಲೆ ಹಲ್ಲೆೆ ಮಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆೆಲೆಯಲ್ಲಿ ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net