ಜೂಜಾಡುತ್ತಿದ್ದ ಸರ್ಕಾರಿ ನೌಕರರ ಸೆರೆ

GAMBLING
Published on

ಕೋಲಾರ: ನಗರದ ಕಠಾರಿಪಾಳ್ಯದಲ್ಲಿನ ಪಾಳುಬಿದ್ದ ಮನೆಯಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ಸಿಇಎನ್ ಪೊಲೀಸರು ಭಾನುವಾರ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದು, ಬಂಧಿತರೆಲ್ಲರೂ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ನೌಕರರು, ಸಿಬ್ಬಂದಿ, ಗುತ್ತಿಗೆದಾರರು, ವ್ಯಾಪಾರಸ್ಥರು ಎನ್ನುವುದು ವಿಶೇಷ.
ಎಸ್‌ಪಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಸಿಇಎನ್ ಇನ್‌ಸ್ಪೆಕ್ಟರ್ ಎಸ್.ಎ.ಆರ್.ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ರಾಜೇಶ್ ಎಂಬುವರ ಮನೆ ಮುಂದೆ ೫ ಮಂದಿ ಮದ್ಯ ಸೇವನೆ ಮಾಡುತ್ತಿರುವುದು ಕಂಡು ಬಂದಿದೆ. ಬಾಗಿಲು ತೆಗೆದು ನೋಡಿದಾಗ ಮನೆಯಲ್ಲಿ 8ರಿಂದ 10 ಮಂದಿ ಇಸ್ಪೀಟ್ ಆಡುತ್ತಿದ್ದು, ಈ ಪೈಕಿ 9 ಮಂದಿಯನ್ನು ಬಂಧಿಸಿ, 9 ಮೊಬೈಲ್, 1.59 ಲಕ್ಷ ರೂ. ನಗದು, 1 ಟೇಬಲ್, 10 ಖುರ್ಚಿ, 1 ಕಾರು, 5 ದ್ವಿಚಕ್ರವಾಹನ ಹಾಗೂ ಮೂರು ಮದ್ಯದ ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಕೆಲವರು ತಲೆಮರೆಸಿಕೊಂಡಿದ್ದಾರೆ.
ಬಾಲ್‌ರಾಜ್ ಬಾಬು (49), ಮುಬಾರಕ್ ಖಾನ್ (42), ಶ್ರೀನಾಥ್ (46), ಶ್ರೀನಿವಾಸ ಗಂಗಡ್ಕರ (47),ನಜೀರ್ (53), ಗುರುರಾಜ್ (47), ರಾಜೇಶ್ (44), ನಾರಾಯಣಗೌಡ (47), ದೇವರಾಜ್ (62) ಬಂಧಿತರು.
ಕಠಾರಿಪಾಳ್ಯದ ನಿವಾಸಿ ವೆಂಕಟೇಶ್ (44), ವಿಶ್ವನಾಥ್ (46), ಸತೀಶ್ (33), ಸಂಪತ್ ಕುಮಾರ್ (49), ಜೆ.ಸತೀಶ್ ಪರಾರಿಯಾಗಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net