ರೈಲಿನ ಮೂಲಕ ಗಾಂಜಾವನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಡ್ರಗ್‌ಪೆಡ್ಲರ್‌ಗಳ ಬಂಧನ

Crime ( Arrest)
Published on


ಬೆಂಗಳೂರು: ಒಡಿಶಾದಿಂದ ರೈಲಿನ ಮೂಲಕ ಮಾದಕ ವಸ್ತುವಾದ ಗಾಂಜಾವನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ಸುಧೀರ್ ರಾಣಾ(೩೨), ಸಂತೋಷ್ ರಾಣಾ(೨೮) ಮತ್ತು ಕ್ಯಾಬನ್ ಬಾಗ್(೩೮) ಬಂಧಿತರು. ಆರೋಪಿಗಳಿಂದ ೧೧ ಲಕ್ಷ ರೂ. ಮೌಲ್ಯದ ೨೧.೧೪ ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದ ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುತ್ತಿದ್ದ ಗಾಂಜಾವನ್ನು ಖರೀದಿಸುತ್ತಿದ್ದ ಆರೋಪಿಗಳು ಅದನ್ನು ರೈಲಿನ ಮೂಲಕ ಬೆಂಗಳೂರಿಗೆ ತಂದು ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ತುಂಬಿಸಿ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಇಸ್ರೋ ಲೇಔಟ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಯಲಹಂಕ ನ್ಯೂಟೌನ್ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳ ಬಳಿ ೨೧ ಕೆ.ಜಿ ಗಾಂಜಾ ಪತ್ತೆಯಾಗಿದೆ ಬಳಿಕ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ಒಡಿಶಾದಿಂದ ಭಾರೀ ಪ್ರಮಾಣದಲ್ಲಿ ಮಾದಕವಸ್ತು ತಂದು ನಗರದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಡ್ರಗ್ ಪೆಡ್ಲರ್‌ಗಳ ಬಂಧನ:
ಮತ್ತೊಂದು ಪ್ರಕರಣದಲ್ಲಿ ಆನ್‌ಲೈನ್‌ನ ಮೂಲಕ ಹಣಕಾಸು ವ್ಯವಹಾರ ನಡೆಸಿ, ಲೋಕೇಷನ್ ಕಳುಹಿಸಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ರಾಜಸ್ಥಾನ ಮೂಲದ ಮೂವರು ಸೇರಿ ನಾಲ್ವರು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ನೇಮಿಚಂದ್(೪೦), ಓಂಪ್ರಕಾಶ್(೩೫), ಪ್ರೇಮರಾಜ್(೪೦) ಮತ್ತು ಬೆಂಗಳೂರಿನ ಥಣಿಸಂದ್ರ ನಿವಾಸಿ ಮಲ್ಲೇಶ್(೩೫) ಬಂಧಿತರು. ಆರೋಪಿಗಳಿಂದ ಮೂರು ಲಕ್ಷ ರೂ. ಮೌಲ್ಯದ ೬೧ ಗ್ರಾಂ ತೂಕದ ಹೆರಾಯಿನ್, ಮೂರು ಮೊಬೈಲ್, ಒಂದು ಕಾರು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಆರೋಪಿಗಳು ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಐಟಿ ಕಂಪನಿಯ ಉದ್ಯೋಗಿಗಳಿಗೆ ಪೂರೈಕೆ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದ ರಾಜಸ್ಥಾನ ಮೂಲದ ಆರೋಪಿಗಳು ನಗರದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಇನ್ನು ಮಲ್ಲೇಶ್ ಕೂಡ ಆರೋಪಿಗಳಿಗೆ ಪರಿಚಸ್ಥನಾಗಿದ್ದ. ಹೀಗಾಗಿ ರಾಜಸ್ಥಾನದಲ್ಲಿ ಕೆಲ ವ್ಯಕ್ತಿಗಳನ್ನು ಪರಿಚಿಯಸಿಕೊಂಡು, ಅಲ್ಲಿಂದಲೇ ಮಾದಕ ವಸ್ತುಗಳನ್ನು ನಗರಕ್ಕೆ ತರಿಸುತ್ತಿದ್ದರು. ತಮಗೆ ಕರೆ ಮಾಡುತ್ತಿದ್ದ ನಿರ್ದಿಷ್ಟ ಗ್ರಾಹಕರಿಂದ ಆನ್‌ಲೈನ್ ಮೂಲಕ ಹಣ ಪಡೆದುಕೊಂಡು, ನಿರ್ಜನ ಪ್ರದೇಶದಲ್ಲಿ ಮಾದಕ ವಸ್ತುವಿನ ಪೊಟ್ಟಣ ಇರಿಸಿ, ಲೋಕೇಷನ್ ಕಳುಹಿಸುತ್ತಿದ್ದರು. ಬಳಿಕ ಗ್ರಾಹಕ ಆ ಲೋಕೇಷನ್‌ಗೆ ಬಂದು ಪೊಟ್ಟಣ ತೆಗೆದುಕೊಂಡು ಹೋಗುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಟ್-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧನ:
ಪದೇ ಪದೇ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಭಾಗಿಯಾಗುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಪಿಟ್-ಎನ್‌ಡಿಪಿಎಸ್ ಕಾಯ್ದೆ ಅಡಿ ಬಂಧಿಸಿದ್ದಾರೆ. ಬಿಹಾರ ಮೂಲದ ಅಖಿಲೇಶ್ ಕುಮಾರ್(೩೦) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ನಿರಂತರವಾಗಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗುತ್ತಿದ್ದ. ಇತ್ತೀಚೆಗೆ ಡ್ರಗ್ಸ್ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಜಾಮೀನು ಪಡೆದು ಬಿಡುಗಡೆ ಬಳಿಕ ಕೋರ್ಟ್‌ನ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಲ್ಲದೆ, ತನ್ನ ಸಹಚರರ ಮೂಲಕ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net