ನೋಂದಣಿ ಸಂಖ್ಯೆ ಮರೆಮಾಚಿದ್ದವನ ಸೆರೆ

ಪೊಲೀಸರ ವಶಕ್ಕೆ
ಪೊಲೀಸರ ವಶಕ್ಕೆ
Published on

ಬೆಂಗಳೂರು: ನೋಂದಣಿ ಸಂಖ್ಯೆ ಮರೆಮಾಚಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನನ್ನು ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿಯ ಕೇಶವ(೪೫) ಬಂಧಿತ ಸವಾರ. ಆತನಿಂದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಜು.೨೪ರಂದು ಕಾಡುಗೋಡಿಯ ಬಸ್ ನಿಲ್ದಾಣದ ಬಳಿ ಸವಾರನೊಬ್ಬ ನೋಂದಣಿ ಸಂಖ್ಯೆ ಮರೆಮಾಚಿಕೊಂಡು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗಿದ್ದ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಆ ದ್ವಿಚಕ್ರ ವಾಹನದ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ನಗರ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಮನವಿ ಮಾಡಿದ್ದರು. ಈ ದೂರಿನ ಮೇರೆಗೆ ಆ ದ್ವಿಚಕ್ರ ವಾಹನ ಮತ್ತು ಸವಾರನನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಕಾಡುಗೋಡಿ ಠಾಣೆ ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net