

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಚೇರಿಯ ಕ್ಯಾಷ್ ಬಾಕ್ಸ್‌ನಲ್ಲಿದ್ದ ೨೫ ಲಕ್ಷ ರೂ. ಕಳ್ಳತನ ಮಾಡಿದ್ದ ಆರೋಪಿಯನ್ನು ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರ್‌ಪಿಸಿ ನಿವಾಸಿ ಲೇಔಟ್ ಮಹೇಶ್(೩೬) ಬಂಧಿತ ಆರೋಪಿ.
ಮಾರ್ಚ್ ೨೦ ರಂದು ರಾತ್ರಿ ವಿಜಯನಗರದ ಸರ್ವಿಸ್ ರಸ್ತೆಯಲ್ಲಿರುವ ಕೆ.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಚೇರಿಯ ಕ್ಯಾಶ್ ಬಾಕ್ಸ್‌ನಲ್ಲಿದ್ದ ೨೫ ಲಕ್ಷ ರೂ. ನಗದನ್ನು ಕದ್ದು ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಒಬ್ಬರ ಮಗನಾಗಿರುವ ಆರೋಪಿ ಮಹೇಶ್ ಕೆ.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ಕಳೆದ ಎರಡು ವರ್ಷದಿಂದ ಕಂಟ್ರ್ಯಾಕ್ಟರ್ ಕೆಲಸ ಮಾಡಿಕೊಂಡಿದ್ದ. ಈತನನ್ನು ಮಾಲೀಕರು ಹೆಚ್ಚಾಗಿ ನಂಬಿದ್ದರು. ಕಾರ್ಮಿಕರಿಗೆ ಸಂಬಳ ನೀಡಲು ೨೫ ಲಕ್ಷ ರೂ. ಅನ್ನು ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಬಂದು ಕಚೇರಿಯಲ್ಲಿಟ್ಟಿದ್ದರು. ಮಾ.೨೦ರಂದು ರಾತ್ರಿ ೮ ಗಂಟೆಯ ವೇಳೆ ಕಚೇರಿಯ ಕ್ಯಾಶ್‌ಬಾಕ್ಸ್‌ನಲ್ಲಿದ್ದ ೨೫ ಲಕ್ಷ ರೂಪಾಯಿ ನಗದನ್ನು ಕದ್ದು ಆರೋಪಿ ಪರಾರಿಯಾಗಿದ್ದ. ಮಹೇಶ್ ವಿರುದ್ಧ ಕಂಪನಿಯ ಮಾಲೀಕರು ವಿಜಯನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಏ.೨೮ ರಂದು ಮಧ್ಯಾಹ್ನ ಮಡಿಕೇರಿ ಟೋಲ್‌ಗೇಟ್ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಕದ್ದ ಹಣ ಸ್ನೇಹಿತನ ಮನೆಯಲ್ಲಿಟ್ಟಿದ್ದ:
ಆರೋಪಿಯು ಕದ್ದ ೨೫ ಲಕ್ಷ ಹಣದಲ್ಲಿ ೫೦ ಸಾವಿರ ಮಾತ್ರ ತೆಗೆದುಕೊಂಡು ಧರ್ಮಸ್ಥಳಕ್ಕೆ ಹೋಗಿದ್ದ ಉಳಿದ ಹಣವನ್ನು ಮೂಡಲಪಾಳ್ಯದಲ್ಲಿರುವ ತನ್ನ ಸ್ನೇಹಿತನ ರೂಂನಲ್ಲಿ ಇಟ್ಟಿದ್ದ. ಆತನ ರೂಂನಲ್ಲಿದ್ದ ೨೪.೫೦ ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.