ಬಾಗೇಪಲ್ಲಿ: ತೆಲಂಗಾಣ, ಆಂಧ್ರಪ್ರದೇಶ ಸೇರಿ ರಾಜ್ಯದ ವಿವಿಧೆಡೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಬಾಗೇಪಲ್ಲಿಯ ಆರೋಪಿಯನ್ನು ಹೈದರಾಬಾದ್ನ ಕೂಕಟ್ಪಲ್ಲಿ ಠಾಣೆ ಪೊಲೀಸರು ಬಂಧಿಸಿ, ಸೋಮವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪಟ್ಟಣದ 1ನೇ ವಾರ್ಡ್ನ ನಿವಾಸಿ ಅಪ್ಪಣ್ಣ ಬಂಧಿತ. ಹೈದರಾಬಾದ್ನಿಂದ ಬಾಗೇಪಲ್ಲಿಗೆ ಆಗಮಿಸಿದ್ದ ಕೂಕಟ್ಪಲ್ಲಿ ಠಾಣೆ ಪೊಲೀಸರು ಸೋಮವಾರ ಬೆಳಗ್ಗೆ ಅಪ್ಪಣ್ಣನ್ನು ಬಂಧಿಸಿ, ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ನಂತರ ಮೆಡ್ಚಲ್ ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಹಾಗೆಯೇ, ಪ್ರಕರಣ ಸಂಬಂಧ ಆಂಧ್ರಪ್ರದೇಶದ 6 ಜನರ ವಿರುದ್ಧ ತೆಲಂಗಾಣ ರಾಜ್ಯದ ಕೂಕಟ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ನ ಕೂಕಟ್ಪಲ್ಲಿ ಠಾಣೆ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ 1 ಕೋಟಿ ರೂ. ಬೆಲೆಬಾಳುವ 820 ಗ್ರಾಂ ಕೊಕೈನ್, ತೂಕದ ಯಂತ್ರ ಹಾಗೂ 5 ಪೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.