

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಇ-ಸಿಗರೇಟ್, ಲ್ಯಾಪ್‌ಟಾಪ್, ಐಫೋನ್ ಹಾಗೂ ಚಿನ್ನದ ಪೇಸ್ಟ್ ಸಾಗಾಟ ಮಾಡತ್ತಿದ್ದ ಶ್ರೀಲಂಕಾ ಪ್ರಜೆ ಸೇರಿ ೩೨ ಮಂದಿಯನ್ನು ಬಂಧಿಸಿದ್ದಾರೆ.
ಆ.೨೩ರಿಂದ ೩೦ರ ಅವಧಿಯಲ್ಲಿ ಥೈಲ್ಯಾಂಡ್, ಮಲೇಷಿಯಾ, ಸಿಂಗಾಪುರ ಹಾಗೂ ಯುಎಇಯಿಂದ ಬೆಂಗಳೂರಿಗೆ ಇ-ಸಿಗರೇಟ್, ನವೀಕರಿಸಲಾದ ಲ್ಯಾಪ್‌ಟಾಪ್ ಹಾಗೂ ಐಫೋನ್‌ಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ೩೧ ಮಂದಿ ಪ್ರಯಾಣಿಕರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ೩.೪೦ ಕೋಟಿ ರೂ. ಮೌಲ್ಯದ ೫,೧೩,೪೦೦ ಇ-ಸಿಗರೇಟ್‌ಗಳು, ೪೩ ನವೀಕರಿಸಿದ ಲ್ಯಾಪ್‌ಟಾಪ್‌ಗಳು, ೧೬ ಐಫೋನ್‌ಗಳು ಪತ್ತೆಯಾಗಿವೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾ ಪ್ರಜೆ ಬಂಧನ
ಕೊಲಂಬೋದಿಂದ ಬೆಂಗಳೂರಿಗೆ ತನ್ನ ಗುದದ್ವಾರದಲ್ಲಿ ಚಿನ್ನದ ಪೇಸ್ಟ್ ತುಂಬಿದ ಕ್ಯಾಪ್ಸುಲ್‌ಗಳು ಹಾಗೂ ಬಿಸ್ಕೆಟ್‌ಗಳನ್ನು ಕೊಂಡೊಯ್ಯುತ್ತಿದ್ದ ಶ್ರೀಲಂಕಾ ಪ್ರಜೆಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ ಆ.೩೧ರಂದು ಶ್ರೀಲಂಕಾದ ಕೊಲಂಬೋದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದ. ಆದರೆ, ಆರೋಪಿಯ ವರ್ತನೆ ಹಾಗೂ ತಪಾಸಣೆ ವೇಳೆ ಆತನ ಅಸಹಕಾರದಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಕೂಡಲೇ ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದಾಗ ಚಿನ್ನದ ಪೇಸ್ಟ್ ಬಗ್ಗೆ ಬಾಯಿಬಿಟ್ಟಿದ್ದಾನೆ. ಬಳಿಕ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತನ ಗುದದ್ವಾರದಲ್ಲಿ ಚಿನ್ನದ ಪೇಸ್ಟ್ ತುಂಬಿದ್ದ ಆರು ಕ್ಯಾಪ್ಸುಲ್ಸ್‌ಗಳು ಹಾಗೂ ಮೂರು ಬಿಸ್ಕೆಟ್ ಮಾದರಿಯ ವಸ್ತುಗಳು ಪತ್ತೆಯಾಗಿದ್ದು, ಸುಮಾರು ೧,೧೯ ಕೋಟಿ ರೂ. ಮೌಲ್ಯದ ೧೬೭೦ ಗ್ರಾಂ ಚಿನ್ನದ ಪೇಸ್ಟ್ ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.