

ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಮರ್ಕಜ್ ತಬ್ಲಿಘಿ ಜಮಾತ್ನ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಕರ್ನಾಟಕದ 1,300 ಜನರು ಭಾಗಿಯಾಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಹಿಂದೆ ಸರ್ಕಾರ ದೆಹಲಿ ಸಭೆಯಲ್ಲಿ ಭಾಗಿಯಾಗಿದ್ದ 391 ಜನರನ್ನು ಕ್ವಾರಂಟೈನ್ಗೆ ಒಳಪಡಿಸಿರುವುದಾಗಿ ಹೇಳಿತ್ತು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ವತಃ ಟ್ವೀಟ್ ಮಾಡಿ 1300 ಜನ ತಬ್ಲಿಘಿ ಸಮಾವೇಶದಿಂದ ಮರಳಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.
ದೆಹಲಿ ಸಭೆಯಲ್ಲಿ ಪಾಲ್ಗೊಂಡವರ ಪೈಕಿ ಈಗಾಗಲೇ ಬೆಂಗಳೂರಿನಲ್ಲಿ 276 ಹಾಗೂ ಇತರ ಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತೂ ಮಾಹಿತಿ ಸಂಗ್ರಹಿಸಿ, ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯರನ್ನು ಹೊರತುಪಡಿಸಿ ಬೇರೆ ಬೇರೆ ದೇಶದ 57 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ರಾಜ್ಯದ ಬೆಂಗಳೂರು (31), ಬೆಳಗಾವಿ (10), ಬೀದರ್ ಮತ್ತು ತುಮಕೂರು (ತಲಾ 8) ಜಿಲ್ಲೆಗಳಲ್ಲಿ ಗುರುತಿಸಿ, ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಭಾರತಕ್ಕೆ ಬರಲು ನೀಡುವ ವೀಸಾ ಪ್ರಕ್ರಿಯೆಯಲ್ಲಿ ಇವರನ್ನು ಕಪು್ಪಪಟ್ಟಿಗೆ ಸೇರಿಸುವ ಸೂಚನೆಯೊಂದಿಗೆ 57 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನ್ಯ ದೇಶದವರಲ್ಲಿ ಇಂಡೋನೇಷ್ಯಾ 20, ರ್ಕಿಗಿಸ್ತಾನ್ 19, ದಕ್ಷಿಣ ಆಫ್ರಿಕಾ 4, ಜಾಂಬಿಯಾ 3, ಯುಕೆ, ಯುಎಸ್ಎ, ಫ್ರಾನ್ಸ್, ಕೀನ್ಯಾ ತಲಾ 1 ಮತ್ತು ಏಳು ಮಂದಿ ಬಾಂಗ್ಲಾ ದೇಶದವರು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಾಹಿತಿ ರವಾನೆ
ಇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ತಬ್ಲಿಘಿ ಜಮಾತ್ನ 581 ಕಾರ್ಯಕರ್ತರ ಹೆಸರುಗಳನ್ನು ಸಂಬಂಧಿಸಿದ ಎಲ್ಲ ರಾಜ್ಯಗಳಿಗೂ ನೀಡಲಾಗಿದೆ. ರಾಜ್ಯದಲ್ಲಿ 808 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿ ಇರಿಸಿ ಪರೀಕ್ಷಿಸಲಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ನೀಡಿದ್ದಾರೆ.
ಬೆಂಗ್ಳೂರಲ್ಲಿ 31 ವಿದೇಶಿ ತಬ್ಲಿಘಿಗಳು
ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಧಾರ್ವಿುಕ ಸಭೆ ಮುಗಿಸಿ ಬೆಂಗಳೂರಿಗೆ ಬಂದವರು 19 ಅಲ್ಲ 31 ವಿದೇಶಿಗರು ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇವರ ಜತೆಗೆ ಕೇರಳ ಮೂಲದ 12 ಮಂದಿ ತಬ್ಲಿಘಿಗಳನ್ನು ಗುರುತಿಸಿದ್ದು, ಎಲ್ಲರಿಗೂ ಕರೊನಾ ಸೋಂಕು ಇಲ್ಲ ಎನ್ನುವುದು ದೃಢಪಟ್ಟಿದೆ. ಈ ಎಲ್ಲರನ್ನು ಹೆಗಡೆನಗರದ ಹಜ್ ಭವನದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಎಲ್ಲರೂ ಪ್ರವಾಸಿ ವೀಸಾದಡಿ ಭಾರತಕ್ಕೆ ಮಾ.9ಕ್ಕೆ ಬಂದು ದೆಹಲಿಯ ಧಾರ್ವಿುಕ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಮಾ. 16ರಂದು ಬೆಂಗಳೂರಿಗೆ ಬಂದು ಪಾದರಾಯನಪುರ 1ನೇ ಕ್ರಾಸ್ನ ಸುಬಾನಿಯ ಮಸೀದಿಯಲ್ಲಿ ತಂಗಿದ್ದರು.
ಇಲ್ಲಿಯೂ ಕೂಡ ಧರ್ಮ ಪ್ರಚಾರ ನಡೆಸಿದ್ದರು. ಇಲಿಯಾಸ್ನಗರ 1ನೇ ಮುಖ್ಯರಸ್ತೆ 8ನೇ ಕ್ರಾಸ್ನ ಅಜೀಜ್ ಎ. ಮೊಹಮ್ಮದ್ ಎಂಬುವರ ಮನೆಯಲ್ಲಿ ಐವರು ವಿದೇಶಿ ತಬ್ಲಿಘಿಗಳು ನೆಲೆಸಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಧರ್ಮ ಪ್ರಚಾರಕ್ಕೆ ಬಂದಿರುವುದು ಗೊತ್ತಾಗಿದೆ. ಶಿವಾಜಿನಗರದ ಸುಲ್ತಾನ್ ಶಾ ಮತ್ತು ಇತರ ಮಸೀದಿಗಳಿಗೆ ಇವರು ಭೇಟಿ ಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರವಾಸಿ ವೀಸಾ ಅಡಿಯಲ್ಲಿ ಭಾರತಕ್ಕೆ ಬಂದು ಧರ್ಮ ಪ್ರಚಾರದಲ್ಲಿ ತೊಡಗಿದ್ದ ಕಾರಣ ವೀಸಾ ಉಲ್ಲಂಘನೆ ಕಾಯ್ದೆಯಡಿ ಜೀವನ್ಬೀಮಾನಗರ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೇರಳದ 12 ತಬ್ಲಿಘಿಗಳು: ಕೇರಳ ಮೂಲದ 12 ಯುವಕರು ದೆಹಲಿಯ ಧರ್ಮ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಇವರೆಲ್ಲರೂ ಕೇರಳದಿಂದ ಮಂಗಳೂರಿಗೆ ಬಂದು ಅಲ್ಲಿಂದ ದೆಹಲಿಗೆ ಹೋಗಿ ಬಳಿಕ ಲಖ್ನೋ ತಲುಪಿ ವಾಪಸ್ ದೆಹಲಿಗೆ ಬಂದು ಸಭೆಯಲ್ಲಿ ಭಾಗವಹಿಸಿದ್ದರು. ಮಾರ್ಚ್ 16ಕ್ಕೆ ಬೆಂಗಳೂರಿಗೆ ವಾಪಸ್ ಬಂದು ಉಳಿದುಕೊಂಡಿದ್ದರು. ಎಲ್ಲರನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿದಾಗ ಕರೊನಾ ಸೋಂಕು ಕಂಡು ಬಂದಿಲ್ಲ. ಹಜ್ ಭವನದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.