ಆರೋಗ್ಯ ಮಿತ್ರರು ಅತಂತ್ರ; 10 ಸಾವಿರ ಆರೋಗ್ಯ ಸಿಬ್ಬಂದಿ ಗುತ್ತಿಗೆ ಅವಧಿ ಅಂತ್ಯ

Front
Published on

| ಸತೀಶ್ ಕಂದಗಲ್​ಪುರ ಬೆಂಗಳೂರು

ರಾಜ್ಯದಲ್ಲಿ ಕರೊನಾ ಮಿತಿಮೀರಿದ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಹೋರಾಡಿದ ಆರೋಗ್ಯ ಮಿತ್ರರ ಜೀವನವೇ ಈಗ ಅತಂತ್ರವಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ 10 ಸಾವಿರಕ್ಕೂ ಅಧಿಕ ಆರೋಗ್ಯ ಸಿಬ್ಬಂದಿ ಮಾ.31ರ ಬಳಿಕ ಉದ್ಯೋಗ ಕಳೆದುಕೊಂಡು ಬೀದಿಗೆ ಬರುವ ಆತಂಕಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸೇವೆ ಸಲ್ಲಿಸುತ್ತಿರುವ 30 ಸಾವಿರಕ್ಕೂ ಅಧಿಕ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ಸೇವಾಭದ್ರತೆ ಇಲ್ಲದೆ ಪರದಾಡುತ್ತಿದ್ದಾರೆ.

ಕರ್ನಾಟಕದಲ್ಲಿ 2020ರ ಮಾ.8ರಂದು ಮೊದಲ ಕೋವಿಡ್ ಪ್ರಕರಣ ಪತ್ತೆಯಾಯಿತು. ಜೂನ್ ವೇಳೆಗೆ ಉಲ್ಬಣಗೊಂಡು ಲಾಕ್​ಡೌನ್ ವಿಧಿಸಲಾಯಿತು. ಆಗ ಕರೊನಾ ಸೋಂಕು ನಿಯಂತ್ರಣ, ನಿರ್ವಹಣೆ ಕಾರ್ಯಕ್ಕೆ ಅಂದಾಜು 10 ಸಾವಿರಕ್ಕೂ ಅಧಿಕ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಯಿತು. ಬಡತನ ಮತ್ತು ನಿರುದ್ಯೋಗದಿಂದ ಬಳಲುತ್ತಿದ್ದ ಯುವಜನರು ಗುತ್ತಿಗೆ ಆಧಾರದಲ್ಲಿ ಕಡಿಮೆ ಹಣಕ್ಕೆ ಜೀವ ಪಣಕ್ಕಿಟ್ಟು, ಕರೊನಾ ವಾರಿಯರ್ಸ್​ಗಳಾಗಿ ಈವರೆಗೂ ಸೇವೆ ಸಲ್ಲಿಸಿದ್ದಾರೆ. ಈಗ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ನಿಮ್ಮ ಅವಶ್ಯಕತೆ ಇಲ್ಲವೆಂದು ವಾರಿಯರ್ಸ್​ಗಳನ್ನು ಮಾ.31ಕ್ಕೆ ಸೇವೆಯಿಂದ ಬಿಡುಗಡೆ ಮಾಡಲಾಗುತ್ತಿದೆ.

ಇವರು ಕರೊನಾ ನಿಯಂತ್ರಣಕ್ಕಾಗಿ ಗುತ್ತಿಗೆ ಆಧಾರದಲ್ಲಿ ದಿನದ 15 ಗಂಟೆಗೂ ಅಧಿಕ ಕಾಲ ರಜೆ ಇಲ್ಲದೆ ಕಾರ್ಯ ನಿರ್ವಹಿಸಿದ್ದಾರೆ. ಈ ಪೈಕಿ 1 ಸಾವಿರ ವೈದ್ಯರು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಫೀವರ್ ಕ್ಲಿನಿಕ್​ಗಳಲ್ಲಿ ಚಿಕಿತ್ಸೆ ನೀಡಿದ್ದಾರೆ. ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನೀಷಿಯನ್, ಸ್ವಾಬ್ ಕಲೆಕ್ಟರ್​ಗಳು ಸೇರಿ 6 ಸಾವಿರ ಸಿಬ್ಬಂದಿ ಸೋಂಕಿತರ ಆರೈಕೆ, ಸಂಪರ್ಕಕ್ಕೆ ಬಂದವರ ಪತ್ತೆ, ಗಂಟಲು ದ್ರವ ಸಂಗ್ರಹಣೆ, ಸ್ವಾಬ್ ಪರೀಕ್ಷೆ ವರದಿ, ಕ್ವಾರಂಟೈನ್, ಕಂಟೇನ್ಮೆಂಟ್ ನಿರ್ಮಾಣ ಹಾಗೂ ಸೀಲ್​ಡೌನ್ ಮಾಡುವ ಕಾರ್ಯ ಮಾಡಿದ್ದಾರೆ. ಉಳಿದಂತೆ ಅಂದಾಜು 1 ಸಾವಿರ ದತ್ತಾಂಶ ಸಂಗ್ರಹಣೆಗಾರರು ಹಾಗೂ 3 ಸಾವಿರಕ್ಕೂ ಅಧಿಕ ‘ಡಿ’ ಗ್ರೂಪ್ ನೌಕರರು ತಮ್ಮದೇ ರೀತಿಯಲ್ಲಿ ಸೇವೆ ಮಾಡಿದ್ದಾರೆ. ಈಗಾಗಲೇ 2 ಸಾವಿರ ಜನ ಉದ್ಯೋಗ ಕಳೆದುಕೊಂಡಿದ್ದು, ಬಾಕಿ 10 ಸಾವಿರ ಆರೋಗ್ಯ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಭರವಸೆ ನೀಡಿರುವಂತೆ ಶೇ.15 ಹೆಚ್ಚುವರಿ ವೇತನವನ್ನು ಪ್ರಸಕ್ತ ವರ್ಷದಿಂದಲೇ ಜಾರಿಗೆ ತರಬೇಕು. ಸೇವಾಭದ್ರತೆ ಒದಗಿಸಬೇಕು. |ಎಚ್.ವೈ.ವಿಶ್ವಾರಾಧ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ

ಸರ್ಕಾರಕ್ಕಿರುವ ಅವಕಾಶ

  • ನಾಲ್ಕನೇ ಅಲೆ ಸಾಧ್ಯತೆಯಿರುವುದರಿಂದ ಅನುಭವಸ್ಥರನ್ನು ಉಳಿಸಿಕೊಳ್ಳಬಹುದು
  • ಮಕ್ಕಳ ಸಾರ್ವತ್ರಿಕ ಲಸಿಕೆ, ಕುಷ್ಠರೋಗ, ಏಡ್ಸ್, ಮಲೇರಿಯಾ, ಡೆಂಘ ನಿಯಂತ್ರಣದಲ್ಲಿ ಗುತ್ತಿಗೆ ಸಿಬ್ಬಂದಿ ಬಳಕೆ ಮಾಡಲು ಅವಕಾಶವಿದೆ
  • ಸಿಬ್ಬಂದಿ ಕೊರತೆಯಿರುವ ಆಸ್ಪತ್ರೆಗಳಲ್ಲಿ ಇವರನ್ನು ಬಳಸಿಕೊಂಡು ಗುಣಮಟ್ಟದ ಸೇವೆ ನೀಡಬಹುದು, ಕಡಿಮೆ ಆರ್ಥಿಕ ವೆಚ್ಚದಲ್ಲಿ 10 ಸಾವಿರ ಸಿಬ್ಬಂದಿ ಸೇವೆ ಪಡೆಯಬಹುದು
  • ಹೊಸ ರೋಗಗಳು ಕಂಡುಬಂದಲ್ಲಿ ನಿಯಂತ್ರಣಕ್ಕೆ ಈ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದು, ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಿದರೆ ಹೊಸದಾಗಿ ಗುತ್ತಿಗೆ ನಿಯೋಜನೆಯನ್ನು ತಪ್ಪಿಸಬಹುದು
  • ಕೋವಿಡ್ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದವರಿಗೆ ನೆರವು ನೀಡಬಹುದು. ಉದ್ಯೋಗದ ಆತಂಕದಲ್ಲಿದ್ದವರಿಗೆ ನೆರವು ನೀಡಿದರೆ ಸರ್ಕಾರಕ್ಕೂ ಒಳ್ಳೆಯ ಕ್ರೆಡಿಟ್ ಸಿಗುತ್ತದೆ

10000 ನೌಕರರ ಬೇಡಿಕೆ ಏನು?

  • ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್​ಎಚ್​ಎಂ) ಅಡಿ ಆರೋಗ್ಯ ಇಲಾಖೆಯಲ್ಲಿ ಒಟ್ಟು 18 ಯೋಜನೆಗಳಿವೆ.
  • ತಾಯಿ ಮಕ್ಕಳ ಆರೋಗ್ಯ, ಕುಷ್ಠರೋಗ, ಪೋಲಿಯೋ, ಏಡ್ಸ್, ಮಲೇರಿಯಾ, ಲೈಫ್ ಸ್ಟೈಲ್ ಡಿಸೀಜ್ ಸೇರಿ ವಿವಿಧ ಯೋಜನೆಗಳಿಗೆ ಕೋವಿಡ್ ವೇಳೆ ನಿಯೋಜನೆಗೊಂಡ ಸಿಬ್ಬಂದಿ ಬಳಸಿಕೊಳ್ಳಬಹುದು
  • ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಸೇರಿ ರಾಜ್ಯಾದ್ಯಂತ 400ಕ್ಕೂ ಅಧಿಕ ‘ನಮ್ಮ ಕ್ಲಿನಿಕ್’ ಸ್ಥಾಪನೆ ಮಾಡಲಾಗುತ್ತಿದ್ದು, ಇಲ್ಲಿಗೆ ತಲಾ 2 ಪಾಳಿಗೆ ವೈದ್ಯರು, ಸ್ಟಾಫ್ ನರ್ಸ್ ಹಾಗೂ ಡಿ ಗ್ರೂಪ್ ನೌಕರರನ್ನು ನಿಯೋಜಿಸಬಹುದು
  • ಈಗಾಗಲೇ ಜಿಲ್ಲೆ, ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವಂತಹ ಆಸ್ಪತ್ರೆಗಳಿಗೆ ಕೋವಿಡ್ ವೇಳೆ ನಿಯೋಜನೆಗೊಂಡವರನ್ನು ಸೇವೆಯಲ್ಲಿ ಮುಂದುವರಿಸಬಹುದು.

30000 ನೌಕರರ ಬೇಡಿಕೆ ಏನು?

  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆಗೆ ಶ್ರೀನಿವಾಸಾಚಾರಿ ವರದಿ ಶೀಘ್ರ ಜಾರಿಗೆ ತರಬೇಕು
  • ಬೀದರ್ ಮಾದರಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಡಿಸಿ ನೇತೃತ್ವದಲ್ಲಿ ಸರ್ಕಾರದಿಂದಲೇ ಸಂಸ್ಥೆಯೊಂದನ್ನು ಸ್ಥಾಪಿಸಿ ಎಲ್ಲ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಅದರಲ್ಲಿ ನೋಂದಾಯಿಸಿ ಸೇವಾ ಭದ್ರತೆ ಒದಗಿಸಬೇಕು
  • 1 ವಾರದಲ್ಲಿ ಬೇಡಿಕೆ ಈಡೇರಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ

ಎನ್​ಎಚ್​ಎಂ ಅಧೀನದಲ್ಲಿ ಕೆಲಸ ಮಾಡುತ್ತಿರುವವರ ಸೇವಾಭದ್ರತೆ ಹಾಗೂ ವೇತನ ಪರಿಷ್ಕರಣೆಗೆ ಶ್ರೀನಿವಾಸಚಾರಿ ಸಮಿತಿ ವರದಿ ಸಲ್ಲಿಕೆಯಾಗಿದ್ದರೂ ಸರ್ಕಾರ ಈವರೆಗೂ ಅನುಷ್ಠಾನಗೊಳಿಸಿಲ್ಲ. ಒಂದು ವಾರದೊಳಗೆ ನೌಕರರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು. | ಶಂಕರ್ ಸುಲೇಗಾಂವ್ ರಾಜ್ಯಾಧ್ಯಕ್ಷ, ಭಾರತೀಯ ಮಜ್ದೂರ್ ಸಂಘ

ಅಭದ್ರತೆಯಲ್ಲೇ 2 ವರ್ಷ ಸೇವೆ

ಕರೊನಾ ವೇಳೆ ಗುತ್ತಿಗೆ ಆಧಾರದಲ್ಲಿ ನಿಯೋಜನೆಗೊಂಡ ಆರೋಗ್ಯ ಸಿಬ್ಬಂದಿಯನ್ನು ಪ್ರತಿ ಕೋವಿಡ್ ಅಲೆ ಪೂರ್ಣಗೊಂಡಾಗಲೂ ಕೆಲಸದಿಂದ ತೆಗೆಯುವುದಾಗಿ 3ನೇ ಅಲೆ ಮುಕ್ತಾಯದವರೆಗೆ 2 ವರ್ಷಗಳ ಕಾಲ ಸೇವೆ ಪಡೆದುಕೊಳ್ಳಲಾಗಿದೆ. ಇದರಲ್ಲಿ ಡಿ ಗ್ರೂಪ್ ಸಿಬ್ಬಂದಿಗೆ 10 ಸಾವಿರ ರೂ., ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಸ್ವಾಬ್ ಕಲೆಕ್ಟರ್​ಗಳಿಗೆ 15 ಸಾವಿರ ರೂ. ಹಾಗೂ ವೈದ್ಯರಿಗೆ 20-25 ಸಾವಿರ ರೂ.ವರೆಗೆ ಮಾಸಿಕ ವೇತನ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯು ಸಿಬ್ಬಂದಿಯ ಮಾಸಿಕ ವೇತನಕ್ಕಾಗಿ ಖರ್ಚು ಮಾಡುವ ಒಟ್ಟು ವೆಚ್ಚದಲ್ಲಿ ಶೇ.3 ಹಣ ಖರ್ಚು ಮಾಡಿದರೆ ಗುತ್ತಿಗೆ ಸಿಬ್ಬಂದಿಯ ಸೇವೆ ಮುಂದುವರೆಸಬಹುದು. ಕಡಿಮೆ ಆರ್ಥಿಕ ವೆಚ್ಚದಲ್ಲಿ ಖಾಸಗಿಗಿಂಥ ಗುಣಮಟ್ಟದ ಸೇವೆ ಕೊಡಲು ಸಾಧ್ಯವಾಗಲಿದೆ.

ಇಂದು ಪ್ರತಿಭಟನೆ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್​ಎಎಸ್​ಟಿ) ಅಡಿ ನಿಯೋಜನೆಗೊಂಡ 200ಕ್ಕೂ ಅಧಿಕ ಗುತ್ತಿಗೆ ನೌಕರರು ಸೋಮವಾರ ಬೆಳಗ್ಗೆ 9 ಗಂಟೆಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಲಿದ್ದಾರೆ. ಕರೊನಾ ನಿಯಂತ್ರಣಕ್ಕೆ ಬಂದ ವೇಳೆ ವಿವಿಧ ಆರೋಗ್ಯ ಯೋಜನೆಯಡಿ ಗುತ್ತಿಗೆ ನೌಕರರನ್ನು ಕೆಲಸ ಮಾಡಿಸಿಕೊಳ್ಳಲಾಗಿದೆ. ಅದೇ ರೀತಿ ಈಗಲೂ ಬೇರೆಬೇರೆ ಯೋಜನೆಯಡಿ ಸೇವೆ ಮುಂದುವರಿಸಲಿ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್​ಕೆ) ಯೋಜನೆಗೆ 500 ಸಿಬ್ಬಂದಿ ಕೊರತೆ ಇದ್ದು, ಇದರಲ್ಲಿ ಮುಂದುವರಿಸಬೇಕು. 2 ವರ್ಷದಿಂದ ಕುಟುಂಬ ನಿರ್ವಹಣೆಗೆ ಗುತ್ತಿಗೆ ನೌಕರಿ ನಂಬಿಕೊಂಡಿದ್ದು, ಅರ್ಧದಲ್ಲಿ ಕೈಬಿಡದೇ ಸೇವೆ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net