ಗಡಿಯಲ್ಲಿ ಭಾರತೀಯ ಸೇನಾಪಡೆಯಿಂದ ಉಗ್ರರ ಲಾಂಚ್​ಪ್ಯಾಡ್​ ಮೇಲೆ ಭಾರಿ ದಾಳಿ, ಒಂದು ಲಾಂಚ್​ಪ್ಯಾಡ್​ ಸಂಪೂರ್ಣ ಧ್ವಂಸ

army
Published on

ನವದೆಹಲಿ: ದೇಶದ ಒಳಭಾಗದಲ್ಲಿ ಕರೊನಾ ಪಿಡುಗಿನ ವಿರುದ್ಧ ಹೋರಾಟ ನಡೆಯುತ್ತಿದ್ದರೆ, ಗಡಿಭಾಗದಲ್ಲಿ ಯೋಧರು ಭಾರತದೊಳಗೆ ನುಸುಳಲು ಸನ್ನದ್ಧರಾಗಿರುವ ಪಾಕಿಸ್ತಾನ ಬೆಂಬಲಿತ ಉಗ್ರರ ಉಪಟಳ ನಿಯಂತ್ರಣದ ಹೋರಾಟದಲ್ಲಿ ತೊಡಗಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಬಳಿಯ ಹಿಮಚ್ಛಾದಿತ ಪರ್ವತ ಶ್ರೇಣಿಗಳಲ್ಲಿ ಈಗ ಹಿಮ ಕರಗಿ, ಓಡಾಡಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಭಾರತದೊಳಗೆ ನುಸುಳಿಸಲು ನೂರಾರು ಉಗ್ರರರನ್ನು ಪಾಕಿಸ್ತಾನ ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಅವರೆಲ್ಲರಿಗೂ ಬೆಂಬಲ ನೀಡುವ ಉದ್ದೇಶದಿಂದ ಪಾಕ್​ ಯೋಧರು ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ ಶೆಲ್ಲಿಂಗ್​ ಮಾಡುತ್ತಿದ್ದಾರೆ.

ಇದಕ್ಕೆ ಶುಕ್ರವಾರ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು, ಉಗ್ರರ ಲಾಂಚ್​ಪ್ಯಾಡ್​ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಕೇರನ್​ ಸೆಕ್ಟರ್​ನ ಕುಪ್ವಾರ ಬಳಿ ಈ ದಾಳಿಗಳು ನಡೆದಿದ್ದು, ಒಂದು ಲಾಂಚ್​ಪ್ಯಾಡ್​ ಸಂಪೂರ್ಣ ಧ್ವಂಸಗೊಂಡಿದೆ. 105 ಎಂಎಂ ಫೀಲ್ಡರ್​ ಗನ್​ ಮತ್ತು 155 ಬೋಫೋರ್ಸ್​ ಹೌವಿಟ್ಸರ್​ಗಳನ್ನು ಬಳಸಿ ಭಾರತೀಯ ಯೋಧರು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಭಾಗದಲ್ಲಿ ಹೆಚ್ಚಿನ ಆಸ್ತಿಪಾಸ್ತಿ ಮತ್ತು ಪ್ರಾಣ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತೀಯ ಪಾಳೆಯದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net