

ಝಾನ್ಸಿ: ಸೇನೆಯ ವೈದ್ಯರೊಬ್ಬರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೇ ತುರ್ತು ಹೆರಿಗೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಘಟನೆ ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಝಾನ್ಸಿ ಮಿಲಿಟರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 31 ವರ್ಷದ ಸೇನಾ ವೈದ್ಯ ಮೇಜರ್ ರೋಹಿತ್ ಬಚ್ವಾಲಾ ಅವರು ಶನಿವಾರ (05) ಮಧ್ಯಾಹ್ನ ಲಕ್ಷ್ಮಿಬಾಯಿ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿದ್ದಾರೆ.
ಪನವೇಲ್-ಗೋರಖಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಶನಿವಾರ (05) ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಮಹಿಳೆ ಗೋಳಾಡುವುದನ್ನು ಕಂಡ ಟಿಕೆಟ್ ಚೆಕ್ಕಿಂಗ್ ಸಿಬ್ಬಂದಿ ಮತ್ತು ಸೇನಾ ವೈದ್ಯಾಧಿಕಾರಿ ಕೂಡಲೇ ಕಾರ್ಯಪ್ರವೃತ್ತರಾಗಿ ಹೆರಿಗೆಯ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ.
ಡಾ.ರೋಹಿತ್ ಬಚ್ವಾಲಾ ಅವರು, ರೈಲ್ವೆ ಸಿಬ್ಬಂದಿಯ ಸಹಾದೊಂದಿಗೆ ಕೇವಲ ಹೇರ್ ಕ್ಲಿಪ್, ಪಾಕೆಟ್ ಚಾಕು, ಧೋತಿಯನ್ನು ಬಳಸಿ ಹೆರಿಗೆ ಮಾಡಿಸಿದ್ದಾರೆ.
(ಏಜೆನ್ಸೀಸ್)
ಅದರಂತಗೆ ಹೆರಿಗೆಯ ನಂತರ ತಾಯಿ ಮತ್ತು ಮಗುವನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರೈಲ್ವೆ ಸಿಬ್ಬಂದಿ ಇದಕ್ಕೆ ಬೇಕಿರುವ ವ್ಯವಸ್ಥೆಗಳನ್ನು ಸುಗಮಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ತಾಯಿ ಮತ್ತು ಮಗು ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ದೃಢಪಡಿಸಿದ್ದಾರೆ.
ಇನ್ನೂ ಈ ಬಗ್ಗೆ ಡಾ.ರೋಹಿತ್ ಮಾತನಾಡಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಕಂಡ ಕೂಡಲೇ ಪ್ಲಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಲು ಮುಂದಾದೆ. ವೈದ್ಯರು ತುರ್ತು ಸಂದರ್ಭಕ್ಕೆ ಸದಾ ಸಿದ್ಧರಾಗಿರಬೇಕು. ದೇವರ ದಯೆಯಿಂದ ನಾನು ಎರಡು ಜೀವಗಳನ್ನು ಉಳಿಸಿದೆ ಎಂದು ವೈದ್ಯರು ಸಂತಸ ಹೊರಹಾಕಿದ್ದಾರೆ.