

ಕೆ.ಆರ್.ನಗರ: ಪಟ್ಟಣದ ಹೊರವಲಯದಲ್ಲಿರುವ ಹಳೇ ಎಡತೊರೆಯ ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ದೇವರ ಗುಡಿಯ ಮುಖ್ಯ ಬಾಗಿಲು ಒಡೆದು ಹುಂಡಿ ಹಣ ದೋಚಲು ಯತ್ನಿಸಿದ್ದಾರೆ.
ತಡರಾತ್ರಿ ದೇವಸ್ಥಾನದ 10 ಅಡಿಗೂ ಎತ್ತರವಿರುವ ಗೋಡೆ ಹತ್ತಿ ಒಳಾಂಗಣ ಪ್ರವೇಶಿಸಿರುವ ಕಳ್ಳರು, ಅರ್ಕೇಶ್ವರ ಸ್ವಾಮಿ ಸನ್ನಿಧಿಯ ಮುಖ್ಯಬಾಗಿಲ ಬಳಿ ಇದ್ದ ಟೇಬಲ್ ಮುರಿದು ಹಾಕಿದ್ದಾರೆ. ನಂತರ ಹಾರೆಯಿಂದ ಬಾಗಿಲು ಮೀಟಿ ಒಡೆದು ಒಳ ಪ್ರವೇಶಿಸಿ ಕಾಣಿಕೆ ಹುಂಡಿಗಳನ್ನು ಒಡೆಯಲು ಯತ್ನಿಸಿ ವಿಫಲರಾಗಿದ್ದಾರೆ.
ಗರ್ಭಗುಡಿ ಬಳಿ ಇದ್ದ ಹಣ್ಣು-ಕಾಯಿಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ದುಷ್ಕರ್ಮಿಗಳು, ದೇವಸ್ಥಾನದ ಪ್ರಾಂಗಣದಲ್ಲಿರುವ ಪ್ರಸಾದ ತಯಾರಿಸುವ ಕೊಠಡಿಗೆ ನುಗ್ಗಿ ಅಡುಗೆ ತಯಾರಿಸುವ ಬೃಹತ್ ಗಾತ್ರದ ಹಿತ್ತಾಳೆ ಪಾತ್ರೆಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಕಳ್ಳರಿಗೆ ಕದಿಯಲು ಯಾವುದೇ ವಸ್ತಗಳು ಸಿಗದಿದ್ದಾಗ ದೇವಸ್ಥಾನದ ಉತ್ತರ ದಿಕ್ಕಿಗೆ ಇರುವ ಬಾಗಿಲು ತೆರೆದು ಹೊರ ಹೋಗಿದ್ದಾರೆ. ಗುರುವಾರ ಬೆಳಗ್ಗೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹಾಗೂ ಸಿಬ್ಬಂದಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಚುರುಮುರಿ ತಯಾರಿಸಿ ತಿಂದಿರುವ ಕಳ್ಳರು: ದೇವಸ್ಥಾನದಲ್ಲಿದ್ದ ಕಡ್ಲೆಪುರಿ, ಕರಿಬೇವಿನ ಸೊಪ್ಪು ಮತ್ತು ಇತರ ವಸ್ತುಗಳಿಂದ ಅಡುಗೆ ಕೊಠಡಿಯಲ್ಲಿದ್ದ ಪಾತ್ರೆಗಳಲ್ಲಿ ಚುರುಮುರಿ ತಯಾರಿಸಿ ತಿಂದಿರುವ ಕಳ್ಳರು, ಸ್ಥಳದಲ್ಲೆಲ್ಲ ಚೆಲ್ಲಾಡಿಕೊಂಡು ಅರ್ಧಂಬರ್ಧ ತಿಂದು ಅಲ್ಲೇ ಬಿಸಾಡಿ ಹೋಗಿದ್ದಾರೆ.
ಬೆಲೆಬಾಳುವ ವಸ್ತುಗಳು ದೇವಾಲಯದಲ್ಲಿಲ್ಲ: ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಹಲವಾರು ಬಾರಿ ಕಳ್ಳತನ ಯತ್ನಗಳು ನಡೆದಿರುವುದರಿಂದ ಹಾಗೂ ದೇವಸ್ಥಾನದ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿರುವುದರಿಂದ ಬೆಲೆ ಬಾಳುವ ವಿಗ್ರಹಗಳು, ದೇವರ ಉತ್ಸವ ಮೂರ್ತಿ, ಇನ್ನಿತರ ಪೂಜಾ ಸಾಮಗ್ರಿಗಳನ್ನು ತಾಲೂಕು ಆಡಳಿತ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದೆ. ಜಾತ್ರೆ ಹಾಗೂ ಹಬ್ಬ ಹರಿದಿನಗಳು ನಡೆಯುವ ಸಂದರ್ಭದಲ್ಲಿ ಮಾತ್ರ ಅವುಗಳನ್ನು ದೇವಾಲಯಕ್ಕೆ ತಂದು ಪೂಜೆ ಪುರಸ್ಕಾರಗಳು ಮುಗಿದ ಮೇಲೆ ಮತ್ತೆ ಅಲ್ಲಿಂದ ತೆಗೆದುಕೊಂಡು ಹೋಗಿ ಸುಭದ್ರವಾಗಿ ಇಡಲಾಗುತ್ತದೆ. ಇದರಿಂದಾಗಿ ದರೋಡೆ ಮಾಡಲು ಯತ್ನಿಸಿರುವ ಖದೀಮರಿಗೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿಲ್ಲ.
ಸಿಸಿ ಟಿವಿ ಇಲ್ಲ: ದೇವಸ್ಥಾನಕ್ಕೆ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿರುವುದರಿಂದ ಕ್ಯಾಮರಾಗಳ ಮೇಲೆ ಮಳೆ ನೀರು ಬಿದ್ದು ಎಲ್ಲ ಸ್ಥಗಿತಗೊಂಡಿವೆ ಎಂದು ತಿಳಿದು ಬಂದಿದೆ.