

ಕೆ.ಆರ್.ನಗರ: ತಾಲೂಕಿನ ಪುರಾಣ ಪ್ರಸಿದ್ಧ ಹಳೆ ಎಡತೊರೆಯ ಶ್ರೀ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಧಾರ್ಮಿಕ ವಿಧಿ ವಿಧಾನಗಳಂತೆ ಮುಂಜಾನೆಯಿಂದಲೇ ರುದ್ರಾಭಿಷೇಕ, ಸೂರ್ಯಮಂಡಲೋತ್ಸವ, ಶ್ರೀ ಅರ್ಕಮುಡಿ ಮುಕುಟಧಾರಣೆ, ಯಾತ್ರದಾನೋತ್ಸವ ನೆರವೇರಿತು. 11.30 ರಿಂದ 12.30ರೊಳಗೆ ಸಲ್ಲುವ ಮೇಷ ಲಗ್ನದಲ್ಲಿ ರಥೋತ್ಸವಕ್ಕೆ ತಹಸೀಲ್ದಾರ್ ಎಂ.ಮಂಜುಳಾ ಚಾಲನೆ ನೀಡಿದರು.
ಇದಕ್ಕೂ ಮುನ್ನ ಅರ್ಚಕರು ಶೈವಾಗಮ ಪದ್ಧತಿಯಂತೆ ದೇವರಿಗೆ ಪೂಜೆ ಸಲ್ಲಿಸಿದ ನಂತರ ಉಯ್ಯಲೆಯಾಡಿಸುತ್ತಾ ದೇವಾಲಯದಿಂದ ಉತ್ವವ ಮೂರ್ತಿಯನ್ನು ತಂದು ವಿಶೇಷವಾಗಿ ಅಲಂಕಾರ ಮಾಡಲಾಗಿದ್ದ ರಥದ ಸುತ್ತಾ ಪ್ರದಕ್ಷಣೆ ಹಾಕಿಸಲಾಯಿತು. ನಂತರ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಜಯಘೋಷ ಕೂಗುತ್ತ ರಥ ಎಳೆದರು.
ರಥೋತ್ಸವಕ್ಕೆ ಆಗಮಿಸಿದ್ದ ನವಜೋಡಿಗಳು, ಯುವಕರು, ಯುವತಿಯರು ಹಾಗೂ ಪ್ರವಾಸಿಗರು ಹಣ್ಣು-ದವನ ಎಸೆದು ಕೃತಾರ್ಥರಾದರು. ಹಿರಿಯರು, ಮಹಿಳೆಯರು, ಮಕ್ಕಳು ಕಾವೇರಿ ನದಿಯಲ್ಲಿ ಮಿಂದು ದೇವರಿಗೆ ಪ್ರದಕ್ಷಿಣೆ ಹಾಕಿ ಇಷ್ಟಾರ್ಥ ನೆರವೇರಿ ಸುವಂತೆ ಪ್ರಾರ್ಥಿಸಿದರು.
ಮುರಿದ ಚಿಕ್ಕ ರಥದ ಚಕ್ರ:- ದೊಡ್ಡರಥಕ್ಕಿಂತ ಮುಂದೆ ಸಾಗುವ ಚಿಕ್ಕ ರಥದ ಬಲಭಾಗದ ಚಕ್ರ ಅರ್ಧಕ್ಕೆ ಮುರಿದು ಹೋಯಿತು. ಇದು ಭಕ್ತರಲ್ಲಿ ಆತಂಕವನ್ನು ಸೃಷ್ಟಿಸಿತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಕೆಲವರು ಇದು ಅಪಶಕುನವೆಂದರೆ, ಇನ್ನೂ ಕೆಲವರು ಇದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಎಂದು ಆರೋಪಿಸಿದರು.
ದನಗಳ ಜಾತ್ರೆ: ರಥೋತ್ಸವದ ಹಿನ್ನೆಲೆಯಲ್ಲಿ ದನಗಳ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿತ್ತು. ತಾಲೂಕಿನಲ್ಲಿ ಚುಂಚನಕಟ್ಟೆ ಜಾತ್ರೆ ಹೊರತುಪಡಿಸಿದರೆ ದನಗಳನ್ನು ಇಲ್ಲಿ ಮಾತ್ರ ಕಟ್ಟಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಜಾತ್ರೆಯಲ್ಲಿ ರಾಸುಗಳನ್ನು ಕಟ್ಟಲಾಗುತ್ತಿಲ್ಲ.
ಸ್ಥಳೀಯ ತರಕಾರಿ ವ್ಯಾಪಾರಿ ಅನ್ಸರ್ ಅವರು ಜಾತ್ರೆಯಲ್ಲಿ ಕಟ್ಟಿರುವ ಸುಮಾರು 1.20 ಲಕ್ಷ ರೂ. ಬೆಲೆಬಾಳುವ ಹಾಲುಹಲ್ಲಿನ ಹೋರಿಗಳು ಮತ್ತು 8 ಬನ್ನೂರು ತಳಿಯ ಟಗರುಗಳು ಎಲ್ಲರ ಗಮನ ಸೆಳೆಯುತ್ತಿದೆ.
ಶಾಸಕ ಸಾ.ರಾ.ಮಹೇಶ್, ಜಿಪಂ ಸದಸ್ಯ ಡಿ.ರವಿಶಂಕರ್, ತಾಪಂ ಅಧ್ಯಕ್ಷ ಬೋರೆನಾಗರಾಜ್, ಜೆಡಿಎಸ್ ಮುಖಂಡ ದೇವರಹಳ್ಳಿ ಸೋಮಶೇಖರ್, ಜೆಡಿಎಸ್ ತಾಲೂಕು ವಕ್ತಾರ ಕೆ.ಎಲ್.ರಮೇಶ್, ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ಪುರಸಭಾ ಸದಸ್ಯೆ ಮಂಜುಳಾ ಚಿಕ್ಕವೀರು, ಸಿಪಿಐ ಪಿ.ಕೆ.ರಾಜು, ದೇವಾಲಯ ವ್ಯವಸ್ಥಾಪಕ ಡಾ.ಎಂ.ಕೆ.ದೇವೇಂದ್ರಕುಮಾರ್ ಮತ್ತಿತರರು ಹಾಜರಿದ್ದರು.