

ಮದ್ದೂರು: ತಾಲೂಕಿನ ಹೆಮ್ಮನಹಳ್ಳಿಯಲ್ಲಿರುವ ಶ್ರೀ ಅರ್ಕೆಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಗುರುವಾರ ದೇವಸ್ಥಾನದ ಕಾರ್ಯದರ್ಶಿ ರಾಜಕುಮಾರ್ ಚಾಲನೆ ನೀಡಿದರು. ಅರ್ಕೆಶ್ವರಸ್ವಾಮಿ ದೇವಸ್ಥಾನವು ಗ್ರಾಮದ ಮುಖ್ಯ ಹಾಗೂ ಹಳೆಯ ದೇವಸ್ಥಾನಗಳಲ್ಲಿ ಒಂದಾಗಿದ್ದು, ಈ ದೇವಸ್ಥಾನವು ಹಲವು ವರ್ಷಗಳಿಂದ ಶಿಥಿಲಾವಸ್ಥೆ ತಲುಪಿದ್ದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಯು ಆರಂಭವಾಗಲಿದ್ದು, ಅದಕ್ಕಾಗಿ ದೇವಸ್ಥಾನದ ಮೂಲ ವಿಗ್ರಹವನ್ನು ದೇವಸ್ಥಾನದ ಪಕ್ಕಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ವಿಗ್ರಹ ಸ್ಥಳಾಂತರದ ವೇಳೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಮತಾ ಉಮೇಶ್, ಕಾರ್ಯದರ್ಶಿ ರಾಜಕುಮಾರ್, ಮುಖಂಡರಾದ ಶಂಕರಣ್ಣ, ಗ್ರಾ.ಪಂ ಸದಸ್ಯರಾದ ಸೌಭಾಗ್ಯಮ್ಮ, ನಾಗೇಶ್, ಉಮೇಶ್, ಮಧುಸೂದನ್ ಇದ್ದರು.