

ಬೆಂಗಳೂರು: ಬಡವರಿಗೆ ಭೂ ಮಂಜೂರುಗೊಳಿಸುವ ಬಗರ್ ಹುಕುಂ ಅರ್ಜಿಗಳನ್ನು ಅರ್ಹ-ಅನರ್ಹ ಎಂದು ನ.25ರ ಒಳಗೆ (Bagar Hukum Application Deadline till nov. 25th) ಎಲ್ಲ ತಹಸೀಲ್ದಾರರೂ ವಿಂಗಡಿಸಿ ಜಿಲ್ಲಾಧಿಕಾರಿಗಳಿಗೆ ನೀಡಬೇಕು. ತಪ್ಪಿದರೆ ಎಲ್ಲರಿಗೂ ಶೋಕಾಸ್ ನೊಟೀಸ್ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ಎಚ್ಚರಿಸಿದರು.
ವಿಕಾಸಸೌಧದಿಂದ ರಾಜ್ಯದ ಎಲ್ಲ ತಹಸೀಲ್ದಾರರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಬಗರ್ ಹುಕುಂ ಅರ್ಜಿ ವಿಲೇ ಪ್ರಗತಿ ಪರಿಶೀಲನೆ ನಡೆಸಿದರು.
ಬಗರ್ ಹುಕುಂ ಕೆಲಸಗಳಿಗೆ ಸಂಬಂಧಿಸಿದಂತೆ ಕೆಲವು ತಹಸೀಲ್ದಾರರು ಅಸಡ್ಡೆ ಧೋರಣೆ ತೋರುತ್ತಿರುವುದು ವಿಷಾದನೀಯ ಎಂದು ತೀವ್ರ ಅಸಾಮಾಧನ ಹೊರಹಾಕಿದರು.
ರಾಜ್ಯದ ಒಟ್ಟಾರೆ 14 ಲಕ್ಷ ರೈತರು ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳ ಪೈಕಿ ಅರ್ಹ ಅರ್ಜಿ ಯಾವುದು? ಅನರ್ಹ ಅರ್ಜಿ ಯಾವುದು? ಎಂದು ಪರಿಶೀಲಿಸಲು ಅಧಿಕಾರಿಗಳಿಗೆ ಒಂದೂವರೆ ವರ್ಷ ಬೇಕಾ? ಎಂದು ಸಚಿವರು ಕಿಡಿಕಾರಿದರು.
ಜಿಲ್ಲಾಧಿಕಾರಿಗಳು ನ.26 ರ ಬೆಳಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು ಎಂದು ತಾಕೀತು ಮಾಡಿದರು.
ಬಗರ್ ಹುಕುಂ ಅರ್ಜಿದಾರರು ನಿರ್ದಿಷ್ಟ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿಲ್ಲ, ನಿರ್ದಿಷ್ಟ ಪ್ರದೇಶದಲ್ಲಿ ಗೋಮಾಳ ಭೂಮಿ ಅಧಿಕ ಇಲ್ಲ, ಅರಣ್ಯ ಭೂಮಿಯನ್ನು ಕೋರಿ ಸಾಗುವಳಿಗೆ ಅರ್ಜಿ ಸಲ್ಲಿಸಿದ್ದರೆ, ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ 4.38 ಎಕರೆಗೂ ಅಧಿಕ ಜಮೀನು ಇದ್ದರೆ, ಅರ್ಜಿದಾರರು ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಪ್ರದೇಶದಲ್ಲಿ ವಾಸ ಇಲ್ಲದಿದ್ದರೆ, ಅರ್ಜಿಯೇ ನಕಲು ಆಗಿದ್ದರೆ ಅಥವಾ ಅರ್ಜಿದಾರರು ಅಧಿಕಾರಿಗಳ ಕೈಗೆ ಸಿಗದಿದ್ದರೆ ಅಂತಹ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗುವುದು. ಇದರ ಹೊರತಾಗಿ ಬೇರೆ ಸ್ವರೂಪದ ಸಮಸ್ಯೆಗಳು ಕಂಡುಬಂದರೆ ಅದನ್ನೂ ಸಹ ಪಟ್ಟಿಮಾಡಿ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ತಹಸೀಲ್ದಾರರಿಗೆ ಸೂಚಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು.
ಬಗರ್ ಹುಕುಂ ಅರ್ಜಿ ವಿಲೇ ಕೆಲಸದಲ್ಲಿ ಅಸಡ್ಡೆ ತೋರಿದ ಮಾಲೂರು ತಾಲೂಕು ತಹಸೀಲ್ದಾರ್ ರಮೇಶ್ ಅವರಿಗೆ ಶೋಕಾಸ್ ನೊಟೀಸ್ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೂಚಿಸಿದರು.
ಮಾಲೂರು ತಾಲೂಕಿನಲ್ಲಿ ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ 10,771 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈವರೆಗೆ ಸ್ಥಳ ಪರಿಶೀಲನೆಗೊಂಡಿರುವ ಅರ್ಜಿಗಳ ಸಂಖ್ಯೆ ಕೇವಲ 55 ಮಾತ್ರ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಸಭೆ ಆರಂಭವಾಗುತ್ತಿದ್ದಂತೆ ಸಚಿವರು ಮಾಲೂರು ತಹಸೀಲ್ದಾರ್ ರಮೇಶ್ ಅವರ ಬಳಿ ಮಾತನಾಡಲು ಯತ್ನಿಸಿದರು. ಆದರೆ, ಅವರು ಸಭೆಗೆ ಒಂದು ಗಂಟೆ ತಡವಾಗಿ ಬಂದರು. ಅಲ್ಲದೆ, ಸಚಿವರ ಪ್ರಶ್ನೆಗಳಿಗೆ ಉತ್ತರಿಸಲೂ ತಡವರಿಸಿದರು. ಹೀಗಾಗಿ ಅವರಿಗೆ ಕೂಡಲೇ ಶೋಕಾಸ್ ನೊಟೀಸ್ ನೀಡುವಂತೆ ನಿರ್ದೇಶನ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ತಹಸೀಲ್ದಾರ್ ಶ್ರೀೀಧರ್ ಶೇಖರ್ ಮುಂದಲಮನಿ ಹಾಗೂ ಮುಂಡಗೋಡು ತಾಲೂಕು ತಹಸೀಲ್ದಾರ್ ಮುಂಡಗೋಡು ಶಂಕರ್ ಗೌಡಿ ಅವರ ಪ್ರಶಂಸಿಸಿದ ಸಚಿವರು, ಹಲವರು ಕೆಲಸ ಮಾಡಿ ಅಂದರೆ ಬಗರ್ ಹುಕುಂ ಆಪ್ ಸಹಕರಿಸುತ್ತಿಲ್ಲ, ನೆಟ್‌ವರ್ಕ್ ಇಲ್ಲ ಎಂದು ಇಲ್ಲ ಸಲ್ಲದ ಕಾರಣ ನೀಡುತ್ತಾರೆ. ಆದರೆ, ನೆಟ್‌ವರ್ಕ್ ಇಲ್ಲ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಹೇಗೆ ಶೇ.80ರಷ್ಟು ಬಗರ್ ಹುಕುಂ ಅರ್ಜಿ ವಿಲೇ ಮಾಡಲು ಸಾಧ್ಯವಾಯಿತು? ಇಲ್ಲಿ ಸಾಧ್ಯವಾಗುವುದಾದರೆ ಬೇರೆ ತಾಲೂಕುಗಳಲ್ಲೂ ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನೆ ಮಾಡಿದರು.
ಕೆಲಸ ಮಾಡದ ಮೈಸೂರಿನ ತಹಸೀಲ್ದಾರರೇ ನಿಮಗೆ ನಾಚಿಕೆ ಆಗಲ್ವ? ನಿಮಗೆ ಮನುಷ್ಯತ್ವ ಇಲ್ವ? ಎಂದು ಅಧಿಕಾರಿಗಳನ್ನು ಇಂದಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಗರ್ ಹುಕುಂ ಅರ್ಜಿ ವಿಲೇ, ನಮೂನೆ 1-5 ಹಾಗೂ ನಮೂನೆ 6-10 ದುರಸ್ತಿ ಕೆಲಸ ಹಾಗೂ ತಹಸೀಲ್ದಾರ್ ತಕರಾರು ಅರ್ಜಿ ವಿಲೇ ಕೆಲಸದಲ್ಲೂ ಮೈಸೂರು ಸಾಕಷ್ಟು ಹಿಂದೆ ಬಿದ್ದಿದೆ. ಹೀಗಾಗಿ ಮೈಸೂರು ಜಿಲ್ಲೆಯ ಎಲ್ಲ ತಾಲೂಕಿನ ತಹಸೀಲ್ದಾರರನ್ನೂ ತರಾಟೆಗೆ ತೆಗೆದುಕೊಂಡ ಸಚಿವರು, ಮೈಸೂರು ಜಿಲ್ಲೆ ಕಳಪೆಯಲ್ಲಿ ಕಳಪೆ ಜಿಲ್ಲೆಯಾಗುತ್ತಿದೆ. ಕೆಲಸ ಮಾಡದ ಅಧಿಕಾರಿಗಳಿಗೆ ಮನುಷ್ಯತ್ವ ಇದೆಯಾ? ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು, ನಾಚಿಕೆ ಆಗಲ್ವ? ಎಂದು ಕೃಷ್ಣ ಬೈರೇಗೌಡ ಕಿಡಿಕಾರಿದರು.