

ಬೆಂಗಳೂರು: ಲಕ್ಷಾಂತರ ಜನ ರೈತರ ಬದುಕಿಗೆ ಬೆನ್ನೆಲುಬಾಗಿರುವ ಅಡಕೆ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರವಿಲ್ಲ, ಬದಲಿಗೆ ಅನೇಕ ಬಗೆಯಲ್ಲಿ ಲಾಭಕರವಿದೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಲೋಕಸಭಾ ಸದಸ್ಯರೊಬ್ಬರು ಅಡಕೆ ಹಾನಿಕಾರಕ ಹಾಗೂ ಅದನ್ನು ಬ್ಯಾನ್ ಮಾಡಬೇಕೆಂದು ನೀಡಿದ್ದ ಹೇಳಿಕೆಯಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ, ಅಡಕೆ ದೇಹಕ್ಕೆ ಹಾನಿಕಾರಕ ಅಲ್ಲ ಹಾಗೂ ಈ ರೀತಿ ಹೇಳಿಕೆಯಿಂದಾಗಿ ಅಡಕೆ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ರಾಜ್ಯದ ಅಡಕೆ ಟಾಸ್ಕ್ ಫೋರ್ಸ್ ನಿಯೋಗದ ದೆಹಲಿಗೆ ತೆರಳಿ ಸಚಿವರನ್ನು ಭೇಟಿ ಮಾಡಲಾಗಿತ್ತು ಎಂದರು.
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ಥೋಮರ್ ಹಾಗೂ ರಾಜ್ಯ ಸಚಿವರನ್ನ ಭೇಟಿ ಮಾಡಲಾಗಿದ್ದು, ಅಡಕೆ ಬಗ್ಗೆ ಕೋರ್ಟ್ನಲ್ಲಿ ತೀರ್ಮಾನ ಆಗದೆ ಯಾವುದೇ ಹೇಳಿಕೆಗಳನ್ನ ನೀಡಬಾರದು. ಅದು ಅಡಿಕೆ ಬೆಳೆಗಾರರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮನವರಿಕೆ ಮಾಡಿದ್ದೇವೆ ಎಂದ ಆರಗ, ಅಡಕೆ ಮನುಷ್ಯನ ದೇಹಕ್ಕೆ ಹಾನಿಕರಕ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಒಂದು ಅಫಿಡವಿಟ್ ನೀಡಿದ್ದು, ಈ ಅಫಿಡವಿಟ್ ತೆಗೆಯುವ ಪ್ರಯತ್ನ ಮಾಡುತ್ತಿದ್ದೇವೆ ಹಾಗೂ ಅಡಕೆ ಹಾನಿಕರಕ ಅಲ್ಲ ಎಂಬ ಬಗ್ಗೆ ನಮ್ಮ ರಾಜ್ಯದಲ್ಲಿ ಸಂಶೋಧನೆಯನ್ನ ಸಹ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್: ಸೈನ್ಸ್ನಲ್ಲಿ ನಮ್ಮ ಟಾಸ್ಕ್ಫೋರ್ಸ್ ಕಡೆಯಿಂದ ಸಂಶೋಧನೆ ನಡೆಯುತ್ತಲಿದೆ ಹಾಗೂ ಕೇಂದ್ರದಿಂದಲೂ ಅಧ್ಯಯನ ನಡೆಸಲು ಒಂದು ಸಮಿತಿ ರಚನೆ ಮಾಡಲಾಗುತ್ತಿದೆ. ಅಡಕೆ ಸೇವನೆ, ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ನಿರೀಕ್ಷೆಯಿದೆ ಹಾಗೂ ರೈತ ಸಮುದಾಯಕ್ಕೆ ಇದರಿಂದ ಬಹಳ ದೊಡ್ಡ ಯಶಸ್ಸು ದೊರೆಯಲಿದೆ ಎಂದರು. ನಾವು ನೀಡಿರುವ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮಗೆ ಅತ್ಯಂತ ಸಂತೋಷವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.