

ನಿನಗೆ ಹರಿದು ಹೋದ ಆ ಸ್ವಲ್ಪ ಜಾಗೆಯಷ್ಟೇ ಕಾಣಿಸಿತಲ್ಲ! ಹರಿಯದೇ ಇರುವ ನನ್ನ ಭುಜದ ಇತರ ಬಹುಭಾಗ ಕಾಣಿಸಲಿಲ್ಲವಾ?’ ಎಂತಹ ಅದ್ಭುತ ಸಂದೇಶ! ಹೌದು, ಇತರರಲ್ಲಿರುವ ಲೋಪದೋಷಗಳನ್ನಷ್ಟೇ ಗುರುತಿಸಿ ಟೀಕೆ ಮಾಡುವ ಬದಲು ಅವರಲ್ಲಿರುವ ಒಳ್ಳೇದನ್ನೇ ನೋಡುವ ದೃಷ್ಟಿ ನಮ್ಮದಾಗಲಿ. ಹೀಗೆ ಮಾಡುವುದರಿಂದ ನಾವೇನೂ ಕಳೆದುಕೊಳ್ಳುವುದಿಲ್ಲ; ಬದಲಾಗಿ, ಆ ವ್ಯಕ್ತಿಗೆ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಸಾಧನೆ ಗೈಯಲು ಪ್ರೇರಣೆ ನೀಡಿದಂತಾಗುತ್ತದೆ;ಮಾತ್ರವೇ ಅಲ್ಲ, ಅವರ ಪ್ರೀತಿ ಸ್ನೇಹಗಳಿಗೂ ಪಾತ್ರರಾಗುತ್ತೇವೆ. ಅವರು ಇಚ್ಛೆಪಟ್ಟರೆ ಮಾತ್ರ ಹಾಗೂ ಅವರು ನಮಗೆ ತುಂಬಾ ಆತ್ಮೀಯರಾಗಿದ್ದಲ್ಲಿ, ಅವರಲ್ಲಿರುವ ಲೋಪದೋಷಗಳನ್ನು ಹೇಳಬಹುದು. ಇಲ್ಲವಾದಲ್ಲಿ, ಸಾಧನೆಗಳನ್ನು, ಸದ್ಗುಣಗಳನ್ನು, ಮೆಚ್ಚಿಕೊಂಡು ಮೆಚ್ಚುಗೆಯ ಮಾತುಗಳನ್ನಾಡುವುದು ಸುಸಂಸ್ಕೃತಿ,
ಇನ್ನು ಕೆಲವರಿಗೆ ಒಂದು ಅಭ್ಯಾಸ. ಅವರನ್ನು ಭೇಟಿಯಾದಾಗಲೆಲ್ಲ ನೀವು ಕೇಳಿ, ಕೇಳದೇ ಇರಿ ತಮ್ಮ ಮತ್ತು ತಮ್ಮವರ ಬಗ್ಗೆ ಹೊಗಳಿಕೊಳ್ಳುವುದು. ಅದು ಅವರ ಸಾಧನೆಗಳ ಬಗ್ಗೆಯೇ ಇರಬಹುದು, ಇಲ್ಲವೇ ಶ್ರೀಮಂತಿಕೆಯ ಬಗ್ಗೆ ಇರಬಹುದು. ಎಲ್ಲವೂ ಕೇಳುವವರಿಗೆ ಅಸಹ್ಯವೆನಿಸುತ್ತದೆ. ಹಾಗಂತ ನಮ್ಮ ಬಗ್ಗೆಯೂ ವಿಚಾರಿಸುವ ವ್ಯವಧಾನವಾಗಲೀ ಆಸಕ್ತಿಯಾಗಲೀ ಇವರಿಗೆ ಇರುವುದೇ ಇಲ್ಲ. ಸಂದೇಶ ಇಷ್ಟೆ; ಇತರರು ಕೇಳಿದರೆ ಮಾತ್ರ ನಮ್ಮ ಬಗ್ಗೆ ಹೇಳಬೇಕು. ಅದೂ ಕೊಂಚ ಕಮ್ಮಿಯೇ ಕೇಳಬೇಕು. ಅವರ ಬಗ್ಗೆಯೂ ವಿಚಾರಿಸಬೇಕು. ಇದು ಒಂದು ಸದ್ಗುಣ. ಕೆಲವರಿಗಂತೂ ಸ್ವಪ್ರಶಂಸೆಯ ಹೊರತಾಗಿ, ಪರನಿಂದನೆಯೂ ಒಂದು ಅಭ್ಯಾಸ.
ನಾವು ಕೇಳದೇನೇ, ಇತರರ ಬಗ್ಗೆ ಅವರ ಲೋಪ, ದೋಷ, ದುರ್ಗಣ ದುರಭ್ಯಾಸಗಳ ಬಗ್ಗೆ ಧಾರಾಳವಾಗಿ ಉಪ್ಪು ಖಾರ ಹಚ್ಚಿ ಹೇಳುತ್ತಾರೆ. ಇದರಿಂದಲೇ ಅವರಿಗೆ ಏನೋ ಒಂದು ಕೆಟ್ಟ ಆನಂದ. ಆದರೆ ಇದು ಸಭ್ಯತೆಯೂ ಅಲ್ಲ. ಸೌಜನ್ಯವೂ ಅಲ್ಲ. ಮಾತ್ರವಲ್ಲ! ಇತರರ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಚಾಡಿ ಹೇಳಿದವರು ನಮ್ಮ ಬಗ್ಗೆಯೂ ಇತರರಿಗೆ ಚಾಡಿ ಹೇಳುತ್ತಾರೆ ಎಂಬುದು ನಿರ್ವಿವಾದ. ಆದುದರಿಂದ ಇತರರ ಬಗ್ಗೆ ಸಾಧ್ಯವಾದರೆ ಒಳ್ಳೇದನ್ನೇ ಹೇಳೋಣ. ಈ ಸತ್ಯವನ್ನೇ ನಮ್ಮಜ್ಜಿ ಹೀಗೆ ಹೇಳುತ್ತಿದ್ದರು. ಯಾರ ಬಗ್ಗೆಯಾದರೂ ಒಳ್ಳೇದನ್ನೇ ಮಾತನಾಡುವ ಸಂದರ್ಭ ಬಂದರೆ, ನಾಲ್ಕು ಮಾತು ಜಾಸ್ತಿ ಮಾತನಾಡಿ ಬಿಡೋಣ. ಆದರೆ ಯಾರ ಕುರಿತಾಗಿ ಕೆಟ್ಟದ್ದನ್ನೇ ಮಾತನಾಡಬೇಕಾದಲ್ಲಿ, ನಾಲ್ಕು ಮಾತು ಕಡಿಮೆ ಆಡಿ ಬಿಡೋಣ.
ಬಹುತೇಕರು ತಪ್ಪು ಮಾಡಿದರೂ, ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಅದಕ್ಕೆ ಏನಾದರೊಂದು ಉತ್ತರ, ಸಮರ್ಥನೆಯನ್ನು ಕೊಡುತ್ತಾ ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ಅವರನ್ನು ಟೀಕಿಸಬಾರದು. ಹೀಗೆ ಮಾಡಿದರೆ ಅವರು ನಮ್ಮ ಮೇಲೆಯೇ ಅಸಮಾಧಾನ ಪಟ್ಟುಕೊಳ್ಳುತ್ತಾರೆ. ಮಾತ್ರವೇ ಅಲ್ಲ, ನಮ್ಮಲ್ಲಿಯೂ ಒಂದು ಸಣ್ಣ ತಪ್ಪನ್ನು ಹುಡುಕಿ ಸಮಯ ಬಂದಾಗ ಅದನ್ನು ಟೀಕಿಸಿ, ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುತ್ತಾರೆ.ಇದರಿಂದ ಸಂಬಂಧಗಳು ಹದಗೆಡುತ್ತವೆ. ಬದಲಾಗಿ, ಅವರ ತಪ್ಪುಗಳನ್ನು ಸಹನೆಯಿಂದ ಸಾವಧಾನವಾಗಿ ಅವರಿಗೆ ಮನವರಿಕೆಯಾಗುವ ರೀತಿಯಲ್ಲಿ ತಿಳಿಸುತ್ತಾ ಅವರನ್ನು ಮನ್ನಿಸುವುದು ಲೇಸು. ಒಟ್ಟಿನಲ್ಲಿ ಯಾರನ್ನು ನೇರವಾಗಿ ಟೀಕಿಸದೆ, ತಾಳ್ಮೆಯಿಂದ, ಜಾಣ್ಮೆಯಿಂದ ತಿದ್ದಬೇಕು. ಇದನ್ನೇ ಬಸವಣ್ಣನವರು ಇದಿರು ಹಳಿಯಲು ಬೇಡವೆಂದರು.
ಇನ್ನು ಕೆಲವರಿಗೆ ಮಾತಿಗೊಂದು ಮಾತು ಹೇಳುವ ಕತೆ ಕಟ್ಟುವ ಅಭ್ಯಾಸ. ಕೇಳಿಸಿಕೊಂಡ ಎಲ್ಲಾ ಮಾತುಗಳಿಗೆ ಉತ್ತರ ಇಲ್ಲವೇ ಸ್ಪಷ್ಟನೆ ನೀಡಬೇಕೆಂದಿಲ್ಲ. ಸುಮ್ಮನಿದ್ದರೂ ಸಾಕು. ಕೆಲವರಿಗಂತೂ ಎಲ್ಲವನ್ನೂ ಕೇಳಿಸಿಕೊಳ್ಳುವ ತಾಳ್ಮೆಯೇ ಇರೋದಿಲ್ಲ. ನಮ್ಮ ವೆಂಕಟೇಶಪ್ಪ ಇದ್ದಾರಲ್ಲ ಎಂದು ಗಂಡ ಮಾತು ಶುರುಮಾಡಿದ ತಕ್ಷಣ ಸತ್ತೇ ಬಿಟ್ರಾ ಎಂಬ ಹೆಂಡತಿಯ ಉದ್ಗಾರ. ಇದು ಅನವಶ್ಯಕ ಹಾಗೂ ಅಪ್ರಸ್ತುತ. ಇನ್ನು ಕೆಲವರಿಗೆ, ನೀವು ಕೇಳದೇನೇ ನಿಮಗೆ ಸಲಹೆ ಸೂಚನೆ ನೀಡುವ, ಉಪದೇಶಮಾಡುವ ಅಭ್ಯಾಸ. ನೀವು ಹಾಗೆ ಮಾಡಬಾರದಿತ್ತು ಎಂಬ ಟೀಕೆ ಇಲ್ಲವೇ ಹೀಗೆ ಮಾಡಬೇಕು ಎಂಬ ಉಪದೇಶ. ಇದೂ ಅನವಶ್ಯಕ. ಇತರರು ಕೇಳಿದರೆ ಮಾತ್ರ ನಮ್ಮ ಸಲಹೆ ಸೂಚನೆ ಕೊಡಬೇಕೇ ವಿನಹ ನಾವಾಗಿಯೇ ಮುನ್ನುಗ್ಗಬಾರದು. ಈ ಗುಣಗಳು ನಿಮ್ಮಲ್ಲಿ ಇವೆಯೇ? ಪರೀಕ್ಷಿಸಿಕೊಳ್ಳಿ. ಇದ್ದರೆ ಸರಿಪಡಿಸಿಕೊಳ್ಳಿ.