ಹಿಂದುಳಿದವರು ತಲೆ ಎತ್ತಿ ಬದುಕಬೇಕೆಂದು ತೋರಿಸಿದ್ದೇ ಅರಸು

Former CM D. Devaraja Arasu's birthday celebration
ನಗರದಲ್ಲಿ ಮಾಜಿ ಸಿಎಂ ಡಿ.ದೇವರಾಜ್ ಅರಸು ಜನ್ಮದಿನಾಚರಣೆ ಸಮಾರಂಭದಲ್ಲಿ ವಿಚಾರವಾದಿ ಬಿ.ಎಂ.ಪುಟ್ಟಯ್ಯ ಮಾತನಾಡಿದರು. ಆರ್.ಕೆ.ಸಿದ್ದರಾಮಣ್ಣ, ತೀ.ನಾ.ಶ್ರೀನಿವಾಸ, ಪ್ರೊ. ಎಚ್.ರಾಚಪ್ಪ, ವಿ.ರಾಜು, ಪಿ.ಗಿರಿಯಪ್ಪ ಇದ್ದರು.
Published on

ಶಿವಮೊಗ್ಗ: ಹಿಂದುಳಿದ ವರ್ಗದವರು ಸಮಾಜದಲ್ಲಿ ತಲೆ ಎತ್ತಿ ಬದುಕಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದೇ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಎಂದು ವಿಚಾರವಾದಿ ಬಿ.ಎಂ.ಪುಟ್ಟಯ್ಯ ಹೇಳಿದರು.

ನಗರದಲ್ಲಿ ಶನಿವಾರ ಹಿಂದುಳಿದ ಜನಜಾಗೃತಿ ವೇದಿಕೆ ಮತ್ತು ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗದವರು ತಮಗಾದ ಅನ್ಯಾಯವನ್ನು ಒಗ್ಗಟ್ಟಿನಿಂದ, ಹಠ ಹಿಡಿದು ಸರಿಪಡಿಸಿಕೊಳ್ಳುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ತಮ್ಮ ಸಮಾಜವನ್ನು ಕಡೆಗಣಿಸುವುದನ್ನು ಸಹಿಸಬಾರದು ಎಂದು ಹೇಳಿದರು.
ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯನ್ನೇ ಸಮಾಜದ ಅಭಿವೃದ್ಧಿ ಎಂದು ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು. ಅದರ ನೆಲಗಟ್ಟಿನ ಮೇಲೆ ದೇವರಾಜ್ ಅರಸು ಸಾಗಿದರು. ಆದ್ದರಿಂದಲೇ ಅವರು ಸಾಮಾಜಿಕ ನ್ಯಾಯದ ಹರಿಕಾರರೆನಿಸಿಕೊಂಡರು ಎಂದರು.
ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗ ರಚಿಸಿದ್ದ ಸಿಎಂ ಸಿದ್ದರಾಮಯ್ಯ ಈಗ ಅದರ ವರದಿಯನ್ನು ಪಡೆದು ಜಾರಿಗೊಳಿಸಲು ಮುಂದಾಗಬೇಕು. ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಬೇಕು ಎಂದರು.
ಹಿಂದುಳಿದ ವರ್ಗಗಳ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನಾ.ಶ್ರೀನಿವಾಸ ಮಾತನಾಡಿ, ಹಿಂದುಳಿದ ವರ್ಗಗಳ ವರದಿ ಜಾರಿಗೊಳಿಸಲು ಎಷ್ಟೇ ಒತ್ತಾಯಿಸಿದರೂ ಸರ್ಕಾರಗಳು ಮುಂದಾಗುತ್ತಿಲ್ಲ. ಜನರು ಈಗ ಚಳವಳಿಗೆ ಇಳಿಯಬೇಕಿದೆ. ಶಿವಮೊಗ್ಗ ಜಿಲ್ಲೆೆಯು ಚಳವಳಿಗಳ ತವರಾಗಿದೆ. ಎಲ್ಲ ಚಳವಳಿಗಳು ಇಲ್ಲಿಯೇ ಆರಂಭವಾಗಿದೆ. ಈಗ ಹಿಂದುಳಿದ ವಗರ್ಗಳ ಚಳವಳಿಗೆ ನಾಂದಿ ಹಾಡಬೇಕಿದೆ ಎಂದರು.
ಡಿವಿಎಸ್‌ನ ನಿವೃತ್ತ ಪ್ರಾಚಾರ್ಯ ಪ್ರೊ. ಎಚ್.ರಾಚಪ್ಪ ಪ್ರಾಸ್ತಾವಿಕ ಮಾತನಾಡಿದರು. ದೇವಾಂಗ ಸಮಾಜದ ಅಧ್ಯಕ್ಷ ಗಿರಿಯಪ್ಪ, ಅಣ್ಣಪ್ಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರಾ ಉಪಸ್ಥಿತರಿದ್ದರು. ನಂತರ ನಡೆದ ವಿಚಾರಗೋಷ್ಟಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರೊ. ಶುಭಾ ಮರವಂತೆ ಮತ್ತು ದೇವರಾಜ ಅರಸು ಮತ್ತು ಹಿಂದುಳಿದವರ ಕಾಳಜಿ ಬಗ್ಗೆ ಅಂಕಣಕಾರ ಬಿ. ಚಂದ್ರೇಗೌಡ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net