ಅರಳುಮಲ್ಲಿಗೆಯ ಪುರಂದರ ಸಂಪುಟ ಅರ್ನ್ಯಘರತ್ನಗಳ ಕಣಜ

Purandaradasa
Published on

ಶಿವರಾಜ ವಿ. ಪಾಟೀಲ್

ಮಾನವ ಜನ್ಮ ದೊಡ್ಡದು ಹಾಗೂ ಮಹತ್ವಪೂರ್ಣವಾದದು, ಉತ್ತಮ ಮಾನವೀಯ ಮೌಲ್ಯಗಳು ಶ್ರೇಷ್ಠವೆಂಬ ಸಂಗತಿಗಳನ್ನು ಇಡೀ ಮಾನವ ಜನಾಂಗಕ್ಕೆ ಮುಟ್ಟಿಸುವ ಕೆಲಸವಾಗಬೇಕು. ಎಲ್ಲರಿಗೂ ಮುಟ್ಟ ಬೇಕು. ಇದನ್ನು ಪರಿಣಾಮಕಾರಿಯಾಗಿ, ಸರಳವಾಗಿ ದಾಸರು ಹೇಳ ತೊಡಗಿದರು. ಈ ನಿಟ್ಟಿನಲ್ಲಿ ಪುರಂದರದಾಸರ ಕೊಡುಗೆ ಅಮೂಲ್ಯ, ಅಮರ ಹಾಗೂ ಮನುಕುಲಕ್ಕೆ ಅಮೃತ. ಎಲ್ಲರಿಗೂ ಗೊತ್ತಿರುವಂತೆ ಮಾತನಾಡುವ ಬದಲು ಅವರು ಹಾಡತೊಡಗಿದರು. ಇವರಾಡಿದ ಮಾತೆಲ್ಲ ಜ್ಯೋತಿರ್ಲಿಂಗವಾಗಿ ಸ್ಪಟಿಕದ ಸಲಾಕೆ ಯಾಗಿ ಹರಿ ಮೆಚ್ಚುವ ಹಾಡುಗಳಾಗಿದ್ದವು. ಈ ಹಾಡುಗಳು ಜನಪರ- ಜನಪ್ರಿಯ ಸಾಹಿತ್ಯ. ಸಂಗೀತ, ಸಂಸ್ಕೃತಿ, ಮಾನವೀಯ ಮೌಲ್ಯಗಳು ಹಾಗೂ ಅಧ್ಯಾತ್ಮವನ್ನು ಒಂದೆಡೆ ಸೇರಿಸಿದವು. ಅವು ಸತ್ಯ ಮತ್ತು ನಿತ್ಯ ನುಡಿಗಳಾದವು. ದಾಸ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ ಅತ್ಯಮೂಲ್ಯ.

ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ‘ಪುರಂದರ ಸಾಹಿತ್ಯ ಗ್ರಂಥ’ ಹೊರತಂದಿದ್ದಾರೆ. ಅವರ ಪುರಂದರ ಸಂಪುಟ-2ಕ್ಕೆ ಪ್ರಥಮ ಆವೃತ್ತಿಯಲ್ಲಿ ಮುನ್ನುಡಿಯೆಂಬ ಹೊನ್ನುಡಿಯನ್ನು ಬರೆದ ಮಹಾಮಹೋಪಾಧ್ಯಾಯ ಪಂಡರೀ ನಾಥಾಚಾರ್ಯ ಗಲಗಲಿ ಅವರು ಹೇಳಿರುವ ಕೆಲವು ವಾಕ್ಯಗಳನ್ನು ಈ ಎರಡನೇ ಆವೃತ್ತಿಯ ಓದುಗರ ಗಮನಕ್ಕೆ ತರುವುದು ಒಳಿತು.

ಅವುಗಳು ಇಂತಿವೆ: ‘ಅರಳುಮಲ್ಲಿಗೆ ಪಾರ್ಥಸಾರಥಿಯವರು ಸಾಧಿಸಿದ ಮಹತ್ಕಾರ್ಯವೆಂದರೆ, ಯಾವುದೇ ಕಾಲದ, ದೇಶದ ಜೀವನದ ಮೌಲ್ಯಮಾಪನದ ಒರೆಗಲ್ಲಿಗೆ ಉಜ್ಜಿ, ಒರೆದು, ತಿಕ್ಕಿ ನೋಡಿದರೂ, ಚೊಕ್ಕ-ಚಿನ್ನವಾಗಿ ನಿಲ್ಲಬಲ್ಲ ಅಪ್ಪಟ ಅಪರಂಜಿ ಸಾಹಿತ್ಯವೆಂದರೆ ಹರಿದಾಸ ಸಾಹಿತ್ಯ ಎಂಬ ಸಿದ್ಧಾಂತವನ್ನು ಸಾರೋದ್ಧಾರವಾಗಿ ಸರ್ವರಿಗೂ, ಸರ್ವಕಾಲಕ್ಕೂ ಸರ್ವದೇಶದ ಜನರ ಮನಸ್ಸಿಗೂ ಮುಟ್ಟುವಂತೆ, ತಟ್ಟುವಂತೆ ಪರಿಣಾಮಕಾರಿಯಾಗಿ ಉಪನ್ಯಾಸ, ಪ್ರವಚನ, ಪ್ರಚಾರ, ಗ್ರಂಥ ರಚನೆ, ಪ್ರಕಟಣೆಗಳ ಮೂಲಕ ಮಾಡಿ, ಹರಿದಾಸ ಸಾಹಿತ್ಯಕ್ಕೆ ಒಂದು ಆಂದೋಲನದ ಸ್ವರೂಪವನ್ನು, ಅಂತಾರಾಷ್ಟ್ರೀಯ ಮಾನ್ಯತೆಯನ್ನು ಅವರು ತಂದುಕೊಟ್ಟಿದ್ದು’.

ಪುರಂದರದಾಸರ ಹಾಡುಗಳು ಮನಮುಟ್ಟುವಂತೆ ಹಾಗೂ ಹೃದಯ ತಟ್ಟುವಂತೆ ಇದೆ. ಜೀವನದ ಸಾಧನೆ, ಸಾಹಿತ್ಯ, ಸಂಗೀತದ ಬಗ್ಗೆ ತಿಳಿಸಿದ್ದಾರೆ. ಈ ಗ್ರಂಥದಲ್ಲಿ ಲೇಖಕರು ಪುರಂದರದಾಸರನ್ನು ಕರ್ನಾಟಕ ಸಂಗೀತದ ಗಂಗೋತ್ರಿ ಮತ್ತು ಕರ್ನಾಟಕ ಸಂಗೀತದ ಸ್ಥಾಪನಾಚಾರ್ಯ ಎಂದಿದ್ದಾರೆ. ಪುರಂದರದಾಸರ ಸಾಮಾಜಿಕ ಕಳಕಳಿಯ ಬಗ್ಗೆ ಈ ರೀತಿ ಹೇಳಿದ್ದಾರೆ:

‘ದಾಸರು ಓಡಾಡಿದ್ದೇ ಜನಸಾಮಾನ್ಯರ ನಡುವೆ, ಸಮಾಜದ ಮಧ್ಯೆ ನಿಂತೇ ಅವರು ತಮ್ಮ ಕಾರ್ಯಸಾಧನೆ ಮಾಡಿದರು. ಆವ ಕುಲವಾದರೇನು ಆತ್ಮಭಾವವ ಅರಿತ ಮೇಲೆ ಎಂದ ದಾಸರು ಮಾನವ ಜನ್ಮದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದು ಹಿತನುಡಿ ನುಡಿದರು’.

ಧರ್ಮಪ್ರಸರಣ ಕಾರ್ಯವು ಸಮಾಜ ಸುಧಾರಣೆ ಮೂಲಕವೇ ಹೆಚ್ಚಿನ ಸಾಧ್ಯತೆ ಹಾಗೂ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂಬುದು ದಾಸರ ವಿಶ್ವಾಸ. ಪುರಂದರದಾಸರು ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ ಹಾಡುಗಳನ್ನು ರಚಿಸಿದ್ದಾರೆ ಎಂಬ ವಾಡಿಕೆಯನ್ನು ಪುರಂದರದಾಸರ ಹಾಡಿನ ಆಧಾರದ ಮೇಲೆ ಎತ್ತಿ ತೋರಿಸಿದ್ದಾರೆ. ಒಂದೊಂದು ಸಂದರ್ಭಕ್ಕೆ ಒಂದೊಂದು ಹಾಡು. ಒಮ್ಮೆ ಪುರಂದರ ದಾಸರನ್ನು ಸ್ನಾನಕ್ಕೆ ಹೋಗೋಣ ಬನ್ನಿ ಎಂದು ಆತ್ಮೀಯರು ಆಹ್ವಾನಿಸಿದರು. ದಾಸರೆಂದರು: ಸ್ನಾನ ಬೇಕು, ಆದರೆ ಯಾವ ಸ್ನಾನ, ‘ಸ್ನಾನ ಮಾಡಿರಯ್ಯಾ ಜ್ಞಾನತೀರ್ಥದಲ್ಲಿ, ನಾನು ನೀನೆಂಬ ಅಹಂಕಾರವ ಬಿಟ್ಟು...’ ಸ್ನಾನದ ವ್ಯಾಖ್ಯಾನ ಇನ್ನೂ ಅರಳುತ್ತದೆ. ಪರಸತಿಯ ಬಯಸದಿದ್ದರೆ ಒಂದು ಸ್ನಾನ, ಪರನಿಂದೆ

ಮಾಡದಿದ್ದರೆ ಒಂದು ಸ್ನಾನ, ಪರದ್ರವ್ಯ ಅಪಹರಿಸದಿದ್ದರೆ ಒಂದು ಸ್ನಾನ. ಪರತತ್ವ ತಿಳಿದುಕೊಂಡರೆ ಒಂದು ಸ್ನಾನ, ಹೀಗೆ ತನು ಶುದ್ಧಿಯೆನ್ನುವುದು ಮನಶುದ್ಧಿಯಲ್ಲಿ ಅಡಗಿದೆ, ನದಿಯಲಿ ಸ್ನಾನವ ಮಾಡಿದರೇನು ಫಲ’.

ದಾಸರ ಸಮುದಾಯ ಸ್ಪಂದನೆ ಬಗ್ಗೆ ಈ ರೀತಿ ಚಿತ್ರಿಸಿದ್ದಾರೆ: ಜನಸಮುದಾಯದ ಭಾಷೆಯನ್ನೇ ತಮ್ಮ ಸಾಹಿತ್ಯದ ಟಂಕಸಾಲೆಯಲ್ಲಿ ಬಳಸಿಕೊಂಡ ದಾಸರು ಉಪ್ಪಿನಕಾಯಿ, ಚಿತ್ರಾನ್ನ, ಅತಿರಸ, ಹಾಸಿಗೆ, ಮಡಕೆ... ಮುಂತಾದ ಸಾಮಾನ್ಯ ಶಬ್ದಗಳನ್ನು ಕೃತಿಗಳಲ್ಲಿ ಹಾಸುಹೊಕ್ಕಾಗಿ ಬಳಸುತ್ತ ಅದನ್ನೇ ದಿವ್ಯಕಾವ್ಯ ಮಾಡುತ್ತಾರೆ. ಈ ಗ್ರಂಥದಲ್ಲಿ ಹರಿದಾಸ ಸಾಹಿತ್ಯದ ಇತಿಹಾಸ, ಕೊಡುಗೆ ಹಾಗೂ ಇತರ ದಾಸರುಗಳಾದ ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ಕನಕದಾಸರು, ವಿಜಯದಾಸರ ಕೊಡುಗೆ ಹಾಗೂ ಮಹತ್ವದ ಬಗ್ಗೆ ಚಿತ್ರಿಸಿದ್ದಾರೆ. ಈ ಕೃತಿ ಒಂದು ಅರ್ನ್ಯಘ ರತ್ನಗಳ ಕಣಜದಂತಿದೆ. ಓದುಗರು ಒಳಹೊಕ್ಕು ಅನೇಕ ಅಮೂಲ್ಯ ಮುತ್ತು, ರತ್ನಗಳನ್ನು ಎತ್ತಿಕೊಳ್ಳಬಹುದು.

(ಲೇಖಕರು ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net